ಸುಳ್ಯ:ಶಾಸಕಿ ಭಾಗೀರಥಿ ಬಗ್ಗೆ ಅವಹೇಳನ ಪೋಸ್ಟ್ ; ಕಾಂಗ್ರೆಸ್ ಕಾರ್ಯಕರ್ತನ ಕೃತ್ಯವೆಂದು ಆರೋಪ, ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು...!!!

ಪುತ್ತೂರು : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಬಂಟ್ವಾಳ ಠಾಣೆಗೆ ಸದಾನಂದ ಎಂಬವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬಿಲ್ಲವ ಸಂದೇಶ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಶಾಸಕಿ ಭಾಗೀರಥಿ ಅವರನ್ನು ಅಗಲಿದ್ದಾರೆಂದು ಬರೆದು ಅವರಿಗೆ ಶ್ರದ್ಧಾಂಜಲಿ ಕೋರುತ್ತಿದ್ದೇವೆಂದು ಅಣಕಿಸಿ ಪೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸುಳ್ಯ ಯುವಮೋರ್ಚಾ ವತಿಯಿಂದ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೋಸ್ಟ್ ಹಾಕಿರುವ ವ್ಯಕ್ತಿ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ, ಕಾಂಗ್ರೆಸ್ ಕಾರ್ಯಕರ್ತನೆಂಬ ಮಾಹಿತಿ ತಿಳಿದು ಬಿಜೆಪಿ ಕಾರ್ಯಕರ್ತ ಸದಾನಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿದ ಪೊಲೀಸರು ದೂರಿನ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಸುಳ್ಯ ಶಾಸಕಿ ಬಗ್ಗೆ ವೈಯಕ್ತಿಕ ನಿಂದನೆಯಷ್ಟೇ ಅಲ್ಲದೆ, ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ದೂರಿನಲ್ಲಿ ಸದಾನಂದ ಆರೋಪಿಸಿದ್ದಾರೆ.