ಬೆಂಗಳೂರು :ಬಿಕಾಂ ಪದವೀಧರೆಯ ತಲೆ ಬೋಳಿಸಿ ಲಿಂಗ ಬದಲಾವಣೆ ಮಾಡಿದ ಮಂಗಳಮುಖಿಯರು, ವೇಶ್ಯಾವಾಟಿಕೆಗೆ ತಳ್ಳಲು ಯತ್ನ...!!

ಬೆಂಗಳೂರು ಮಂಗಳಮುಖಿಯರ ಅಟ್ಟಹಾಸದ ಮತ್ತೊಂದು ಘಟನೆ ವರದಿಯಾಗಿದೆ.
ನಗರದ ಬಿ.ಕಾಂ. ಪದವೀಧರೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಆಕೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿ, ನಂತರ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ.
ಶ್ರೀರಾಮಪುರ ನಿವಾಸಿ ಜೆರೋಮಿಯಾ ಎಂಬುವರು ಬಿ.ಕಾಂ ಪದವೀಧರೆ. ಇವರಿಗೆ ಐಶ್ವರ್ಯಾ ರೆಡ್ಡಿ ಎಂಬ ಮಂಗಳಮುಖಿ ಪರಿಚಯವಾಗಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಇದಕ್ಕೆ ಪೂರಕವಾಗಿ ಜೆರೋಮಿಯಾಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ ಮುಗಿಯುತ್ತಿದ್ದಂತೆ ಐಶ್ವರ್ಯಾ ರೆಡ್ಡಿಯ ಅಸಲಿ ರೂಪ ಹೊರಬಂದಿದೆ.
‘ನಿನ್ನ ಶಸ್ತ್ರಚಿಕಿತ್ಸೆ ಮತ್ತು ಮಂಗಳಮುಖಿ ಕಾರ್ಯಕ್ರಮಕ್ಕೆ ನಾನೇ ಸಾಲ ಮಾಡಿ ಹಣ ಖರ್ಚು ಮಾಡಿದ್ದೇನೆ. ಆ ಸಾಲ ತೀರಿಸಲು ನೀನು ಪ್ರತಿನಿತ್ಯ ಸೆಕ್ಸ್ ವರ್ಕರ್ ಆಗಿ ಕೆಲಸ ಮಾಡಬೇಕು. ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಸಂಪಾದಿಸಿ ತಂದುಕೊಡಬೇಕು’ ಎಂದು ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ತಂಡ ಜೆರೋಮಿಯಾಗೆ ಕಿರುಕುಳ ನೀಡಲು ಆರಂಭಿಸಿದೆ.
ವೇಶ್ಯಾವಾಟಿಕೆಗೆ ನಿರಾಕರಿಸಿದ ಜೆರೋಮಿಯಾ ಮೇಲೆ ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಬಲವಂತವಾಗಿ ಜೆರೋಮಿಯಾ ಅವರ ತಲೆ ಕೂದಲು ಬೋಳಿಸಿ, ರೂಮ್‌ನಲ್ಲಿ ಕೂಡಿ ಹಾಕಿ ಟಾರ್ಚರ್ ನೀಡಿದ್ದಾರೆ.
ಈ ಅಮಾನವೀಯ ಕೃತ್ಯದಿಂದ ನೊಂದ ಜೆರೋಮಿಯಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ಸಂತ್ರಸ್ತ ಜೆರೋಮಿಯಾ ನೀಡಿದ ದೂರಿನನ್ವಯ ಶ್ರೀರಾಮಪುರ ಪೊಲೀಸರು ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ಜತೆಯಲ್ಲಿದ್ದ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.