ತುಮಕೂರು :ಅತ್ತೆ ಕಿರುಕುಳ ಆರೋಪ ; ಸೊಸೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಪ್ ಗೆ ಹಾರಿ ಆತ್ಮಹತ್ಯೆ, ಅತ್ತೆಯನ್ನು ಬಂಧಿಸಿದ ತುಮಕೂರು ಪೊಲೀಸರು...!

ತುಮಕೂರು: ಇಬ್ಬರು ಮಕ್ಕಳ ಜೊತೆ ತಾಯಿ ಶವ ಸಂಪ್ ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅತ್ತೆ ಕಿರುಕುಳಕ್ಕೆ ಇಬ್ಬರು ಮಕ್ಕಳೊಂದಿಗೆ ಸೊಸೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಆರೋಪ ಕೇಳಿಬಂದಿದೆ.
ತುಮಕೂರು ತಾಲೂಕಿನ ಸಿಂಗನಹಳ್ಳಿಯಲ್ಲಿ ವಿಜಯಲಕ್ಷ್ಮಿ ಎಂಬ ಮಹಿಳೆ ತನ್ನ ಐದು ವರ್ಷದ ಇಬ್ಬರು ಮಕ್ಕಳ ಜೊತೆ ಮನೆಯ ಸಂಪ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಮೃತಳ ಸಹೋದರಿ ಅತ್ತೆ ರೇಣುಕಮ್ಮ ವಿರುದ್ಧ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧಿಸಿ ಪೊಲೀಸರು ಮೃತ ವಿಜಯಲಕ್ಷ್ಮಿಯ ಅತ್ತೆ ರೇಣುಕಮ್ಮ ಅವರನ್ನು ಬಂಧಿಸಿದ್ದಾರೆ. ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಅತ್ತೆಯಿಂದ ಸೊಸೆಗೆ ಕಿರುಕುಳ ನೀಡುತ್ತಿದ್ದ ಆರೋಪಗಳಿದ್ದವು. ಇತ್ತೀಚೆಗೆ ಒಂದಷ್ಟು ವಸ್ತುಗಳನ್ನು ವಿಜಯಲಕ್ಷ್ಮಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದಳು. ಇದೇ ವಿಚಾರವಾಗಿ ಅತ್ತೆ ರೇಣುಕಮ್ಮ ಸೊಸೆಗೆ ಕಿರುಕುಳ ನೀಡಿದ್ದರು.
ಈ ಬಗ್ಗೆ ಮಾತಿಗೆ ಮಾತು ಬೆಳೆದು ಅತ್ತೆ ರೇಣುಕಮ್ಮ, ಮಗನಿಗೆ ಹೊರೆಯಾಗಿದ್ದೀಯಾ ನೀನು ಜರೆದಿದ್ದಳಂತೆ. ಇದೇ ವಿಚಾರದಲ್ಲಿ ನೊಂದು ವಿಜಯಲಕ್ಷ್ಮಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪ ಕೇಳಿಬಂದಿದೆ. ಮಹಿಳಾ ಠಾಣೆ ಪೊಲೀಸರು ಇದೀಗ ಅತ್ತೆ ರೇಣುಕಮ್ಮಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ