ಧಾರವಾಡ: ಮೊಮೋಸ್ ಫಾಸ್ಟ್ ಫುಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ಆರು ಜನರು ಅಸ್ವಸ್ಥ, ಓರ್ವ ಸಾವು; ಕಾರಣ ನಿಗೂಢ..!!
ಧಾರವಾಡ: ಉಸಿರಾಟದ ತೊಂದರೆಯಿಂದ ನೇಪಾಳ ಮೂಲದ ಆರು ಜನರು ಅಸ್ವಸ್ಥರಾಗಿ ಓರ್ವ ಮೃತಪಟ್ಟ ಘಟನೆ ನಗರದ ಸಾಯಿ ದರ್ಶಿನಿ ಲೇಔಟ್ನಲ್ಲಿ ನಡೆದಿದೆ. ಘಟನೆಗೆ ನಿಖರ ಕಾರಣ ತನಿಖೆ ಬಳಿಕ ಬರಬೇಕಿದೆ.
ನೇಪಾಳ ಮೂಲದ ಏಳು ಜನರು ಧಾರವಾಡದ ಕೆಸಿ ಪಾರ್ಕ್ ಬಳಿ ಇರುವ ಮೊಮೊಸ್ ಫಾಸ್ಟ್ ಫುಡ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಿಬೇಕ್ (40) ಮೃತರಾಗಿದ್ದಾರೆ. ನರೇಶ (45), ನಿತೇಶ್ (18), ಡಿಕೆಶಿ (40), ಸುಧನ್ (30), ಕುಮಾರ್ (50), ಲಕ್ಷ್ಮಣ್ (30) ಅಸ್ವಸ್ಥರಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಮೃತ ಬಿಬೇಕ್ ಹುಬ್ಬಳ್ಳಿ ಮೂಲಕವಾಗಿ ಊರಿಗೆ ಹೋಗಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದ. ಬೆಳಗ್ಗೆ ಎಂದಿನಂತೆ ಯಾರೂ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದ್ದು, ಬಳಿಕ ತಾವೇ ತಮ್ಮ ವಾಹನದ ಮೂಲಕ ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದೇವೆ" ಎಂದು ಮೊಮೊಸ್ ಮಾಲಕಿ ಯೋಗೀತಾ ತಿಳಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ವಿದ್ಯಾಗಿರಿ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಜಿಲ್ಲಾಸ್ಪತ್ರೆಗೆ ಹೋಗಿ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು..
ಪೊಲೀಸ್ ಕಮಿಷನರ್ ಪ್ರತಿಕ್ರಿಯೆ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆ ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ವಿದ್ಯಾಗಿರಿ ಸರಹದ್ದಿನಲ್ಲಿ ಇರುವ ಸಾಯಿ ದರ್ಶಿನಿ ಎನ್ನುವ ಬಡಾವಣೆಯಲ್ಲಿ ಒಂದು ಮನೆ ಇದೆ. ಈ ಮನೆಯಲ್ಲಿ ನೇಪಾಳ ಮೂಲದ ವ್ಯಕ್ತಿಗಳು ವಾಸ ಇರುತ್ತಾರೆ. ಇವರ ಈ ಗುಂಪಿನಲ್ಲಿ 25, 30, 40 ವಯಸ್ಸಿನವರೂ ಇದ್ದಾರೆ. ಇವರು ಚಿಂಗ್ಸ್, ಚಾಂಗ್ಸ್ ಎನ್ನುವ ಮೊಮೊಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಬೆಳಗ್ಗೆ ಯಾಕೆ ಇವರು ಕೆಲಸಕ್ಕೆ ಬಂದಿಲ್ಲ ಎಂದು ಪರಿಶೀಲಿಸಿದಾಗ ಇವರೆಲ್ಲ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ತಕ್ಷಣ ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರಲ್ಲಿ ಒಬ್ಬ ಬಿಬೇಕ್ ಎಂಬುವ 40 ವರ್ಷದ ವ್ಯಕ್ತಿ ಮೃತ ಸ್ಥಿತಿಯಲ್ಲಿ ಸಿಕ್ಕಿದ್ದಾನೆ. ಸೂಕ್ತ ಕಾರಣ ಗೊತ್ತಿಲ್ಲ".
"ಈ ಬಗ್ಗೆ ಕೆಲಸಗಾರರ ಮಾಲೀಕರು ತಿಳಿಸಿರುವುದು ಏನೇಂದರೆ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಇದ್ದಿಲನ್ನು ಬಳಸಿದ್ದಾರೆ. ಮಾಂಸಹಾರಿ ಪದಾರ್ಥವನ್ನು ಗ್ರಿಲ್ ಮಾಡಿಕೊಂಡು ತಿಂದಿದ್ದಾರೆ. ಅದರಿಂದ ಏನಾದರೂ ನಂತರದಲ್ಲಿ ಉಸಿರು ಕಟ್ಟುವಂತಹದ್ದು ಅಥವಾ ಆಮ್ಲಜನಕ ಬರದೇ ಇರುವಂತಹದ್ದು ಸಧ್ಯಕ್ಕೆ ಹೇಳುತ್ತಿದ್ದಾರೆ. ನಾನು ಬಂದು ಪರಿಶೀಲಿಸಿದಾಗ ಅವರು ಅಡುಗೆ ಮಾಡಿಕೊಂಡಿರುವುದು ಹೌದು. ಆದರೆ ಗ್ಯಾಸ್ ನಂತಹ ಯಾವುದೇ ಪರಿಕರ ಇದ್ದಿರಲಿಲ್ಲ. ಮತ್ತು ಆ ರೂಂ ಸಂಪೂರ್ಣವಾಗಿ ಕಿಟಕಿ, ಬಾಗಿಲಿನಿಂದ ಮುಚ್ಚಿದೆ. ಅಥವಾ ಫುಡ್ ಪಾಯಿಸನಿಂಗ್ನಿಂದ ಆಗಿದೆಯಾ ಎಂಬುವುದು ತನಿಖೆ ಬಳಿಕ ತಿಳಿದು ಬರಬೇಕಷ್ಟೆ. ಒಟ್ಟು 6 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸ್ಥಿರವಾಗಿದ್ದಾರೆ ಎಂಬುದು ಸದ್ಯದ ಮಾಹಿತಿ" ಎಂದು ತಿಳಿಸಿದರು.