ಮಂಗಳೂರು: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ್ಮಿಕನಿಗೆ ನಿರಂತರ ಹಲ್ಲೆ ; ಕುಳೂರಿನ ನಾಲ್ವರು ಯುವಕರ ಮೇಲೆ ಪ್ರಕರಣ ದಾಖಲು..!!

ಮಂಗಳೂರು: ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಹಲ್ಲೆ ನಡೆಸಿದ ಘಟನೆ ಕಾವೂರು ಠಾಣೆ ವ್ಯಾಪ್ತಿಯ ಕುಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಹಿಂದು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್, ಮೋಹನ್ ಎಂದು ಗುರುತಿಸಲಾಗಿದೆ, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ 10–15 ವರ್ಷಗಳಿಂದ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದು ತನ್ನ ಇನ್ನೊಬ್ಬ ಗೆಳೆಯನ ಜೊತೆಗೆ ಕುಳೂರಿನಲ್ಲಿ ನೆಲೆಸಿದ್ದ. ಈತನಿಗೆ ಸ್ಥಳೀಯರಾದ ನಾಲ್ವರು ಆರೋಪಿಗಳು ಕಳೆದ 5-6 ತಿಂಗಳಿನಿಂದ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಹೇಳಿ ಹಲ್ಲೆ ನಡೆಸುತ್ತಿದ್ದರು. ತಾನು ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ.
ನಿನ್ನೆ ಭಾನುವಾರ ಸಂಜೆ ಮತ್ತೆ ದಿಲ್‌ಜಾನ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಈ ವೇಳೆ, ಸ್ಥಳೀಯ ಹಿಂದು ಮಹಿಳೆಯರು ರಕ್ಷಿಸಿ ಹೊಡೆಯದಂತೆ ತಡೆದಿದ್ದಾರೆ. ಆದರೆ ದುಷ್ಕರ್ಮಿಗಳ ಭಯದಿಂದ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದ. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಲಸೆ ಕಾರ್ಮಿಕನನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧಿಸಿ ಹಲ್ಲೆಗೀಡಾದ ವ್ಯಕ್ತಿಯಿಂದ ಮಾಹಿತಿ ಪಡೆದು ದೂರು ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ