ಬೆಳಗಾವಿ: ವೈದ್ಯನ ಮನೆಯಲ್ಲಿ ಗಾಂಜಾ ಪತ್ತೆ: ಪೊಲೀಸ್ ಕಮಿಷನರ್ ಹೇಳಿದ್ದೇನು?
ಬೆಳಗಾವಿ : ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನೇ ಗಾಂಜಾ ಘಮಲೇರಿಸಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳ ವೈದ್ಯರಾಗಿರುವ ಡಾ.ರಾಹುಲ್ ವಿಠಲ ಬಂಟಿ ಅವರ ಮನೆಯಲ್ಲಿ ಗಾಂಜಾ ದೊರೆತಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಡಾ.ರಾಹುಲ್ ಬಂಟಿ ಅವರ ಶಿವಬಸವ ನಗರದ ಮನೆ ಮೇಲೆ ದಾಳಿ ಮಾಡಿದಾಗ 134 ಗ್ರಾಂ ಗಾಂಜಾ ಸಿಕ್ಕಿದೆ. ಅಷ್ಟೇ ಅಲ್ಲದೇ, ವೈದ್ಯ ಗಾಂಜಾ ಸೇವಿಸಿರುವ ವಿಚಾರವೂ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಮಕ್ಕಳ ಆರೋಗ್ಯ ಕಾಪಾಡುವ ವೈದ್ಯನೇ ಈ ರೀತಿ ಮಾದಕ ವಸ್ತು ಸೇವನೆ ಮಾಡಿದರೆ ಮಕ್ಕಳ ಜೀವವನ್ನು ಆ ದೇವರೇ ಕಾಪಾಡಬೇಕು. ಗಾಂಜಾ ನಶೆಯಲ್ಲಿ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ, ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಗಾಂಜಾ ಜಪ್ತಿ ಮಾಡಿಕೊಂಡಿರುವ ಮಾಳಮಾರುತಿ ಪೊಲೀಸರು ಡಾ.ರಾಹುಲ್ ಬಂಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ನೀಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, "ಜನವರಿ 9ರಂದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯ ಮನೆ ಬೆಡ್ ರೂಮಿನಲ್ಲಿ 134 ಗ್ರಾಂ ಗಾಂಜಾ ಸಿಕ್ಕಿದೆ. ಆರೋಪಿ ವೃತ್ತಿಯಲ್ಲಿ ವೈದ್ಯ. ಇದನ್ನು ಎಲ್ಲಿಂದ ತಂದಿದ್ದಾರೆ? ಮಾರಾಟಕ್ಕೆ ತಂದಿದ್ದರೋ? ಅಥವಾ ಸೇವನೆಗೆ ತಂದಿದ್ದರೋ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ" ಎಂದರು.