ಬೆಂಗಳೂರು :ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾಡಿದ ಮಾಧವ ಗಾಡ್ಗೀಳ್ ಇನ್ನಿಲ್ಲ ; ವಿಶ್ವದ ಖ್ಯಾತ ಪರಿಸರ ತಜ್ಞರಲ್ಲಿ ಒಬ್ಬರಾಗಿದ್ದ ಗಾಡ್ಗೀಳ್..!!

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾಡಿದ, ಭಾರತದ ಅಗ್ರಗಣ್ಯ ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಬುಧವಾರ ತಡರಾತ್ರಿ ಪುಣೆಯ ತಮ್ಮ ನಿವಾಸದಲ್ಲಿ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1942 ಮೇ 24ರಂದು ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಹಾರ್ವರ್ಡ್ ವಿವಿಯಿಂದ ಎಂಎಸ್ಸಿ ಪಡೆದಿದ್ದರು. 1969 ರಲ್ಲಿ ಹಾರ್ವರ್ಡ್‌ನಲ್ಲೇ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. 1971 ರಲ್ಲಿ ಭಾರತಕ್ಕೆ ಮರಳಿದ ಬಳಿಕ 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿದ್ದರು. 30 ವರ್ಷಗಳ ಕಾಲ ಸೇವೆ ಸಲ್ಲಿಸಿ, 2004 ರಲ್ಲಿ ಅದರ ಅಧ್ಯಕ್ಷರಾಗಿದ್ದರು.
ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಗಾಡ್ಗೀಳ್ ಅವರು, ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು. ಇವರ ನೇತೃತ್ವದ ಸಮಿತಿ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿತ್ತು. ಇವರ ವರದಿಯು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.
ವಿಶ್ವಸಂಸ್ಥೆಯು 2024ರಲ್ಲಿ ಡಾ. ಗಾಡ್ಗೀಳ್ ಅವರಿಗೆ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ. ಈ ವರ್ಷದ ಆರು ಪ್ರಶಸ್ತಿ ವಿಜೇತರಲ್ಲಿ ಇವರು ಒಬ್ಬರಾಗಿದ್ದರು. 1986ರಲ್ಲಿ ಭಾರತದ ಮೊದಲ ಬಯೋಸ್ಫಿಯರ್ ರಿಸರ್ವ್ (ನೀಲಗಿರಿ) ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರು ಪಶ್ಚಿಮ ಘಟ್ಟದ ಮೂರು ರಾಜ್ಯಗಳ ಕಾಡುಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ, ಅಲ್ಲಿನ ಆದಿವಾಸಿಗಳು ಮತ್ತು ಅರಣ್ಯವಾಸಿಗಳೊಂದಿಗಿದ್ದು ಪರಿಸರದ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದರು.