ಮಂಗಳೂರು: ಟೆಕ್ಕಿ ಸಾವಿಗೆ ಬಿಗ್ ಟ್ವಿಸ್ಟ್ ; ಪಕ್ಕದ್ಮನೆಯ 18ರ ಹುಡುಗನೇ ಕಂತ್ರಿ! ಪಿಯುಸಿ ವಿದ್ಯಾರ್ಥಿಯ ವನ್ ಸೈಡ್ ಲವ್ವಿಗೆ ಯುವತಿ ಬಲಿ, ಉಸಿರುಕಟ್ಟಿಸಿ ಸಾಯಿಸಿ ಶಾರ್ಟ್ ಸರ್ಕಿಟ್ ಎಂಬ ಕಥೆ ಸೃಷ್ಟಿ

ಬೆಂಗಳೂರು: ಅಪಾರ್ಟ್ಮೆಂಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಉಂಟಾದ ಹೊಗೆಯಿಂದಾಗಿ ಮಂಗಳೂರು ಮೂಲದ ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಅವಘಡದಿಂದ ಆಕೆ ಸಾವನಪ್ಪಿಲ್ಲ, ಬದಲಾಗಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದು, ಕೊಲೆಗೆ ಕಾರಣನಾದ ಹದಿಹರೆಯದ ಯುವಕನನ್ನು ಅರೆಸ್ಟ್ ಮಾಡಿದ್ದಾರೆ.
ರಾಮಮೂರ್ತಿನಗರ ಠಾಣೆ ಪೊಲೀಸರು ಕೆಲವೇ ಸುಳಿವುಗಳನ್ನು ಬೆನ್ನತ್ತಿ ಆರೋಪಿ ಕೇರಳ ಮೂಲದ ಕರ್ನಲ್ ಕುರೈ (18) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಜನವರಿ 3ರಂದು ತಡರಾತ್ರಿ ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಎಂಬಾಕೆ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿದ್ದಳು. ಬೆಡ್ ಮತ್ತು ಮನೆಯ ಒಳಗಡೆ ಸುಟ್ಟಿದ್ದು ಬೆಂಕಿ ಆವರಿಸಿದ್ದರಿಂದ ಅದೇ ಕಾರಣಕ್ಕೆ ಮೃತಪಟ್ಟಿದ್ದಾಗಿ ಶಂಕಿಸಲಾಗಿತ್ತು. ಆದರೆ ಶರ್ಮಿಳಾ ಮೊಬೈಲ್ ಫೋನ್ ಕಾಣೆಯಾಗಿದ್ದು ಮತ್ತು ಬೆಂಕಿ ಅವಘಡಕ್ಕೆ ಕಾರಣವೇನೆಂದು ತಿಳಿದುಬರದೇ ಇದ್ದುದು ಹೊರಗಿನ ಶಕ್ತಿಗಳ ಬಗ್ಗೆ ಶಂಕೆ ಬಂದಿತ್ತು. ಪೊಲೀಸರು ಮೊಬೈಲ್ ಬೆನ್ನತ್ತಿದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿತ್ತು.



ಮಂಗಳೂರಿನಿಂದ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ ಶರ್ಮಿಳಾ ಬೆಂಗಳೂರಿನ ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಬೆಂಗಳೂರಿನ ಸುಬ್ರಮಣ್ಯ ಲೇಔಟ್ನಲ್ಲಿ ವಾಸವಿದ್ದರು. ಅದೇ ಫ್ಲಾಟ್ನ ಮುಂದಿನ ಫ್ಲಾಟ್ ನಲ್ಲಿ ಕೇರಳ ಮೂಲದ 18 ವರ್ಷದ ವಿದ್ಯಾರ್ಥಿ ಕರ್ನಲ್ ಕುರೈ ವಾಸವಿದ್ದ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಪಕ್ಕದ ನಿವಾಸಿ ಎನ್ನುವ ಕಾರಣಕ್ಕೆ ಈತನಿಗೆ ಶರ್ಮಿಳಾ ಬಗ್ಗೆ ಮುಖ ಪರಿಚಯವಿತ್ತು. ಜೊತೆಗೆ, ತನ್ನಷ್ಟಕ್ಕೇ ಏಕಮುಖದ ಪ್ರೀತಿಯನ್ನೂ ಬೆಳೆಸಿಕೊಂಡಿದ್ದ.
ಜನವರಿ 3ರಂದು ರಾತ್ರಿ ಶರ್ಮಿಳಾ ಮನೆಯಲ್ಲಿ ಒಬ್ಬಳೇ ಇದ್ದಳು. ಸಹವರ್ತಿ ಹುಡುಗಿ ತನ್ನ ಊರಿಗೆ ತೆರಳಿದ್ದಳು. ಈ ವಿಚಾರ ಅರಿತಿದ್ದ ಕುರೈ, ತಡರಾತ್ರಿ ವೇಳೆಗೆ ಅಪಾರ್ಟ್‌ಮೆಂಟಿನ ಸ್ಲೈಡಿಂಗ್ ವಿಂಡೋ ಮೂಲಕ ಶರ್ಮಿಳಾ ಮನೆಯೊಳಗೆ ನುಗ್ಗಿದ್ದಾನೆ. ಏಕಾಏಕಿ ಒಳನುಗ್ಗಿದ ಆರೋಪಿ, ಶರ್ಮಿಳಾ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದು, ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆರೋಪಿ ಬಲವಂತವಾಗಿ ಆಕೆಯ ಮೇಲೆ ಎರಗಿದ್ದು, ಶರ್ಮಿಳಾ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದ ಶರ್ಮಿಳಾಳನ್ನು ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜನವರಿ 3 ರಂದು ರಾತ್ರಿ 11ರ ಸುಮಾರಿಗೆ ಅಪಾರ್ಟ್ಮೆಂಟಿನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪಕ್ಕದ ಮನೆಯವರು ಅಗ್ನಿಶಾಮಕ ಮತ್ತು ಪೊಲೀಸರಿಗೆ ಕರೆ ಮಾಡಿದ್ದರು. ಒಳಗೆ ನೋಡಿದಾಗ ಬೆಡ್ ಮತ್ತು ಮನೆಯ ಒಳಗಡೆ ಸುಟ್ಟಿರುವುದು ಕಂಡುಬಂದಿತ್ತು. ಯುವತಿ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದೇ ಪೊಲೀಸರು ಶಂಕಿಸಿದ್ದರು. ಆದರೆ ರೂಮಿನ ಕಿಟಕಿ ತೆರೆದಿರುವುದು, ಫೋನ್ ನಾಪತ್ತೆಯಾಗಿರುವುದು ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಹೊರಗಿನ ಕೈವಾಡದ ಬಗ್ಗೆ ಸುಳಿವು ನೀಡಿತ್ತು. ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸೋರಿಕೆಯಾಗಲೀ ಆಗಿರಲಿಲ್ಲ. ಶವ ಪತ್ತೆಯಾದ ಕೋಣೆಯ ಕಿಟಕಿ ತೆರೆದಿದ್ದು, ಸಹಜವಾಗಿ ಉಸಿರುಗಟ್ಟಿ ಸಾವು ಸಂಭವಿಸಿರುವ ಬಗ್ಗೆ ಅನುಮಾನಗಳನ್ನು ಹುಟ್ಟಿಸಿತ್ತು. ಜೊತೆಗೆ ಶವ ಆಕೆ ಮಲಗುವ ಕೋಣೆಯಲ್ಲಿ ಪತ್ತೆಯಾಗಿರಲಿಲ್ಲ. ಬದಲಾಗಿ ಆಕೆಯ ಜೊತೆಗಿದ್ದ ಸಹವರ್ತಿ ಗೆಳತಿಯ ಕೋಣೆಯಲ್ಲಿ ಕಂಡುಬಂದಿತ್ತು. ಘಟನೆ ನಡೆದಾಗ ಆಕೆ ಊರಿನಲ್ಲಿ ಇರಲಿಲ್ಲ.
ಇದಲ್ಲದೆ, ಶರ್ಮಿಳಾ ಮೊಬೈಲ್ ಫೋನ್ ಕಾಣೆಯಾಗಿತ್ತು. ಮನೆ ಮಾತ್ರ ಒಳಗಿನಿಂದ ಲಾಕ್ ಆಗಿದ್ದುದು ಯಾರೋ ಒಳಗಡೆ ಬಂದು ಹೋಗಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ಅನುಮಾನದಲ್ಲಿ ತನಿಖೆ ನಡೆಸಿದ್ದರು. ಯುವತಿ ಕುಟುಂಬಸ್ಥರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಕಾಣೆಯಾದ ಮೊಬೈಲ್ ಫೋನ್ ಬೆನ್ನತ್ತಿದಾಗ ಅದು ಎದುರಿನ ಮನೆಯ ಹುಡುಗನ ಕೈವಾಡದ ಬಗ್ಗೆ ಸುಳಿವು ನೀಡಿತ್ತು. ಪೊಲೀಸರು ಕುರೈನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ.