ಮಂಗಳೂರು :ಪುಕ್ಕಟೆಯಾಗಿ ಕೊಟ್ಟರೂ ಬೇಡ ಎನ್ನುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಡಿಮ್ಯಾಂಡ್..!!

ಮಂಗಳೂರು :ಪುಕ್ಕಟೆಯಾಗಿ ಕೊಟ್ಟರೂ ಬೇಡ ಎನ್ನುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಡಿಮ್ಯಾಂಡ್..!!


ಮಂಗಳೂರು :ಗುಜರಿ ವಸ್ತುಗಳನ್ನು ಕೇಳಿಕೊಂಡು ಮನೆ ಮನೆಗೆ ಬರುವವರು ಈಗ ಹೆಚ್ಚಾಗಿ ಕೇಳುವುದು ಗೆರಟೆಯನ್ನು. ಗೆರಟೆ ಉದ್ಯಮ ಬೆಳೆದಿರುವುದರಿಂದ ಗೆರಟೆಗೆ ಬೇಡಿಕೆ ಕೂಡ ಹೆಚ್ಚಾಗಿದೆ.

ಕರ್ನಾಟಕದ ಕರಾವಳಿಯಿಂದ ಹಿಡಿದು ಕೇರಳ, ತಮಿಳುನಾಡಿನವರೆಗೂ ಈ ಗೆರಟೆ ವ್ಯಾಪಾರ ಆರ್ಥಿಕ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಅಡುಗೆಮನೆಯ ಕಸ ‘ಚಿಪ್ಪು’ ಸಂಗ್ರಹ ಉದ್ಯಮವಾಗಿ ಬೆಳೆದಿದೆ.

ತೆಂಗಿನ ಕಾಯಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಆಹಾರ ಪದಾರ್ಥವಾಗಿ ಉಪಯೋಗಿಸುತ್ತಿದ್ದು, ತೆಂಗಿನಕಾಯಿ ಎಣ್ಣೆ ಎಲ್ಲೆಡೆ ಬಳಕೆಯಿದ್ದರೂ, ಹಸಿ ತೆಂಗಿನಕಾಯಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ. ತೆಂಗಿನಕಾಯಿ ಹಸಿಯಾಗಿ ಮತ್ತು ಎಣ್ಣೆ ಹೆಚ್ಚಿನ ಬಳಕೆಯದ್ದಾಗಿದ್ದರೆ, ಅದರ ಚಿಪ್ಪು ಒಂದು ಹಂತದ ಬೇಡಿಕೆಯಲ್ಲಿತ್ತು. ಆದರೆ ಇತ್ತೀಚೆಗೆ ಗೆರಟೆಯನ್ನು(ತೆಂಗಿನಕಾಯಿ ಒಳಗಿನ ಬಲು ಗಟ್ಟಿಯಾದ ಭಾಗ) ವಿವಿಧ ಕಾರ್ಖಾನೆಗಳ ಉಪಯೋಗಕ್ಕೆ ಬಳಸುವುದರಿಂದ ಹೆಚ್ಚಿನ ಬೇಡಿಕೆ ಕಂಡಿದೆ.

ಕಾಸರಗೋಡಿನ ತೆಂಗಿನಕಾಯಿ ವ್ಯಾಪಾರಿ ಎಸ್.ಕೆ ಹುಸೇನ್ ಅವರು ಈ ಬಗ್ಗೆ ಮಾತನಾಡುತ್ತಾ, ತೆಂಗಿನಕಾಯಿ ಗೆರಟೆ ಕರಕುಶಲ ಕಲೆಯವರಿಗೆ ಬಹಳ ಸಣ್ಣ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಆದರೀಗ ಇದ್ದಿಲು ಫ್ಯಾಕ್ಟರಿಗಳು ಹೆಚ್ಚಾದ ಕಾರಣ ಬೇಡಿಕೆಯೂ ಹೆಚ್ಚಾಗಿದೆ. ಈಗ ರೈತರು ಮಾತ್ರವಲ್ಲದೇ ದಿನಕ್ಕೆ ಒಂದೋ ಅರ್ಧ ತೆಂಗಿನಕಾಯಿ ಬಳಸುವ ಮನೆಮಂದಿ ಕೂಡಾ ತಿಂಗಳಿಗೊಮ್ಮೆ ತೆಂಗಿನಕಾಯಿ ಗೆರಟೆ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. “ ಕೇರಳ ರಾಜ್ಯದಲ್ಲಿ ಆರು ಇದ್ದಿಲು ಫ್ಯಾಕ್ಟರಿಗಳಿರುವ ಬಗ್ಗೆ ಗೊತ್ತಿದೆ. ಅಲ್ಲದೇ ತಮಿಳುನಾಡಿನಿಂದಲೂ ಗೆರಟೆ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ. ಹಾಗಾಗಿ ವ್ಯವಹಾರದಲ್ಲಿ ಈಗ ತೆಂಗಿನಕಾಯಿಯಷ್ಟೇ ಪ್ರಾಮುಖ್ಯತೆಯನ್ನು ಗೆರಟೆಗೂ ನೀಡುವಂತಾಗಿದೆ’’ ಎನ್ನುತ್ತಾರವರು.

 

ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿನ ಮನೆಗಳಲ್ಲಿ ಪ್ರತೀದಿನ ತೆಂಗಿನಕಾಯಿ ಬಳಸುವ ಕಾರಣಕ್ಕೆ ಗೆರಟೆ ಸಂಗ್ರಹ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ. ದಿನಂಪ್ರತಿ ಮನೆಬಾಗಿಲಿಗೆ ಹೋಗಿ ಒಂದು ತೆಂಗಿನಕಾಯಿಯ ಒಂದು ಭಾಗ ಗೆರಟೆಗೆ ರೂ.೧ ರಿಂದ ರೂ. ೧.೫೦ವರೆಗೆ ನೀಡಿ ಖರೀದಿಸುತ್ತಾರೆ. ಹೀಗೆ ಖರೀದಿಸಿದ ಗೆರಟೆಯನ್ನು ತೆಂಗಿನಕಾಯಿ ವ್ಯಾಪಾರದ ಅಂಗಡಿಗಳಿಗೆ ಕಿಲೋ ಗ್ರಾಮ್ಸ್ ಲೆಕ್ಕಾಚಾರದಲ್ಲಿ ಮಾರಾಟಮಾಡುತ್ತಾರ

 

ಪುತ್ತೂರಿನ ಎಮ್ ಎಸ್ ಟ್ರೇಡರ್ಸ್​​ ಮಾಲಿಕ ಶರೀಫ್ ಹೇಳುವಂತೆ, ತೆಂಗಿನಕಾಯಿ ಚಿಪ್ಪು ಕಿಲೋ ಒಂದರ ರೂ.25 ರಿಂದ ರೂ.100ರ ಬೆಲೆಯಲ್ಲಿ ಕಳೆದ ವರ್ಷ ಕೇರಳದ ಫ್ಯಾಕ್ಟರಿ ಒಂದಕ್ಕೆ ಮಾರಾಟವಾಗಿದೆ. ಈ ವರ್ಷ ಬೆಲೆ ಹೆಚ್ಚುತ್ತಲೇ ಇದ್ದು, ರೂ.150 ತಲುಪಬಹುದು. ತಾಜಾ ಆಗಿರುವ ಚಿಪ್ಪು ಇನ್ನಷ್ಟು ಬೇಡಿಕೆ ಪಡೆದುಕೊಳ್ಳುತ್ತದೆ. ಹಿಂದೆ ತೆಂಗಿನಕಾಯಿ ಸಿಪ್ಪೆಯಿಂದ ನಾರು, ಕೊಕೊಪಿಟ್, ಹಾಗೆಯೇ ನಾರಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು. ಈಗ ಅದರ ಡಿಮಾಂಡ್ ಕಡಿಮೆಯಾಗಿದೆ. ಬದಲಿಗೆ ಗೆರಟೆಗೆ ಡಿಮಾಂಡ್ ಬಂದಿದೆ, ಎನ್ನುತ್ತಾರೆ.

 

ಗೆರಟೆಯಿಂದ ತಯಾರಿಸಿದ ಗೃಹೋಪಯೋಗಿ ಸಾಧನಗಳು ಜನಪ್ರಿಯವಾಗಿತ್ತು. ಅಡುಗೆ ಮನೆಗೆ ಬೇಕಾಗುವ ಸೌಟು, ಕಪ್‌ಗಳು, ಹಾಗೇ ಅಲಂಕಾರಿಕ ವಸ್ತುಗಳು ಬಹಳ ಹಿಂದಿನ ಕಾಲದಿಂದ ಬೇಡಿಕೆಯಲ್ಲಿತ್ತು. ಬೇಗನೇ ಕೊಳೆಯದ ಕಾರಣ ತೋಟಗಳಲ್ಲಿ ಗಿಡಗಳ ಬುಡಗಳಿಗೆ ಹಾಕಿ ಬೇರು ಸರಾಗವಾಗಿ ಸಂಚರಿಸಲು ಪ್ರಯೋಜನಕಾರಿ ಎಂದೂ ಬಳಸಲಾಗುತ್ತದೆ.

 

ಗೆರಟೆಯನ್ನು ಕರಕುಶಲ ವಸ್ತುಗಳನ್ನು ತಯಾರಿಸುವುದು ಸಣ್ಣ ಪ್ರಮಾಣದ ಉದ್ಯಮವಾದರೆ, ಇದ್ದಿಲು ತಯಾರಿಸಲು ಬಳಸುತ್ತಿರುವುದು ದೊಡ್ಡ ಪ್ರಮಾಣದ್ದಾಗಿದೆ. ಗೆರಟೆಯನ್ನು ಸುಟ್ಟಾಗ ದೊರೆಯುವ ಇದ್ದಿಲನ್ನು ನೀರು ಶುದ್ಧೀಕರಣ ಘಟಕಗಳಲ್ಲಿ,ಹೋಟೆಲುಗಳಲ್ಲಿ ಬಾರ್ಬೆಕ್ಯೂ /ಗ್ರಿಲ್‌ಗೆ, ಇಲೆಕ್ಟಿçಕ್ ಗ್ರಿಡ್‌ಗಳಿಗೆ ಮತ್ತು ಬೇರೆ ಬೇರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಭಾರತದಿಂದ ಮುಖ್ಯವಾಗಿ ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಕೂಡಾ ಆಗುತ್ತಿದೆ. ಆನ್‌ಲೈನ್ ಶಾಪ್‌ಗಳಲ್ಲಿ ಇದ್ದಿಲು ಮಾರಾಟವಾಗುತ್ತಿದೆ.

ಅಂತೂ ತ್ಯಾಜ್ಯವೆಂದು ಪರಿಗಣಿಸಲ್ಪಡುತ್ತಿದ್ದ ಗೆರಟೆಗೆ ಇನ್ನಷ್ಟು ಬೇಡಿಕೆ ಬರುತ್ತಿದೆ.

Ads on article

Advertise in articles 1

advertising articles 2

Advertise under the article