ಬೆಂಗಳೂರು :ಆನ್ ಲೈನ್ ನಲ್ಲಿ ವಶೀಕರಣ ಜಾಹೀರಾತು ನಂಬಿ ಲಕ್ಷ ಲಕ್ಷಣ ಹಣ ಕಳೆದುಕೊಂಡ ಯುವತಿ...!!!

ಬೆಂಗಳೂರು: ಆನ್ ಲೈನ್ ನಲ್ಲಿ ವಶೀಕರಣ ಜಾಹೀರಾತು ನಂಬಿ ಪ್ರೀತಿಸಿದ ಯುವಕ ಸಿಗುವಂತೆ ಮಾಡಲು ವಶೀಕರಣ ಮಾಡುವುದಾಗಿ ಹೇಳಿ ಯುವತಿಯಿಂದ ಹಂತ ಹಂತವಾಗಿ ಲಕ್ಷ ಲಕ್ಷ ಹಣ ದೋಚಿದ ಖದೀಮರ ಗ್ಯಾಂಗ್ 2 ಲಕ್ಷಕ್ಕೂ ಅಧಿಕ ಹಣ ಪಡೆದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಗುರೂಜಿ ಎಂಬಾತನ ಹೆಸರಲ್ಲಿ ಕಷ್ಟಕ್ಕೆ ಪರಿಹಾರ ನೀಡುವುದಾಗಿ ಹೇಳಿ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಜಾಹೀರಾತು ನೀಡಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಕರೆ ಮಾಡಿದ್ದ ಯುವತಿಯೊಬ್ಬಳು ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಆಕೆಯೊಂದಿಗೆ ಚಂದ್ರಶೇಖರ್ ಸಗತ್ ಗುರೂಜಿ ಎಂಬಾತ ಮಾತನಾಡಿದ್ದ. ಯುವತಿ ತಾನು ಪ್ರೀತಿಸಿದ ಯುವಕ ಸಿಗಬೇಕು ಅದಕ್ಕಾಗಿ ಸಹಾಯ ಮಾಡುವಂತೆ ಕೇಳಿದ್ದಾಳೆ. ಅದಕ್ಕೆ ಗುರೂಜಿ ಪ್ರೀತಿಸಿದ ಯುವಕ ಸಿಗುತ್ತಾನೆ. ಮದುವೆಯಾಗುತ್ತದೆ. ಆದರೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿದ್ದಾನೆ. ವಶೀಕರಣ ಮಾಡುವುದಾಗಿ ಹೇಳಿ ಯುವತಿಯಿಂದ ಹಂತ ಹಂತವಾಗಿ ಹಣ ಪಡೆದಿದ್ದಾನೆ.
ಯುವತಿ ಪ್ರೀತಿಸಿದ ಯುವಕ ಸಿಗುತ್ತಾನೆ ಎಂದು ನಂಬಿ ಗುರೂಜಿ ಹೇಳಿದಂತೆ ಹಣ ವರ್ಗಾಯಿಸಿದ್ದಾಳೆ. ಹಂತ ಹಂತವಾಗಿ 2.5 ಲಕ್ಷ ಹಣವನ್ನು ಪಡೆದ ಗುರೂಜಿ ಕೆಲ ದಿನಗಳ ಬಳಿಕ ಒಮ್ಮೆಲೇ ೪ ಲಕ್ಷ ಹಣ ಕೇಳಿದ್ದಾನೆ. ಆಗ ಯುವತಿಗೆ ಅನುಮಾನ ಶುರುವಾಗಿದೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಯುವತಿ ಗುರೂಜಿಗೆ ಹಣ ವಾಪಾಸ್ ಕೇಳಿದ್ದಾಳೆ. ಆದರೆ ಗುರೂಜಿ ಏನು ಮಾಡುತ್ತಿಯೋ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನಂತೆ.
ಹಣ ಕಳೆದುಕೊಂಡ ಯುವತಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.