ಮಂಗಳೂರು :ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮುಸ್ಲಿಂ ಮಾಲಕರಿಗೆ ಹಣಕ್ಕಾಗಿ ಪೀಡಿಸಿ, ಹಲ್ಲೆ ಯತ್ನ ; ದನಗಳನ್ನು ಕಡಿಯಲು ಕೊಡ್ತೀಯಲ್ವಾ ಎಂದು ಹಫ್ತಾ ಕೇಳಿದ ಆರೋಪಿಗಳನ್ನು ಓಡಿಸಿದ ಸ್ಥಳೀಯರು..!!

ಮಂಗಳೂರು : ಕೋಣಗಳನ್ನು ಮುದ್ದಿನಿಂದ ಸಾಕಿ ಕಂಬಳಕ್ಕೆ ಓಡಿಸಲು ಕೊಂಡೊಯ್ಯುವ ಮುಲ್ಕಿಯ ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಎಂಬವರ ಮನೆಗೆ ನುಗ್ಗಿದ ಮೂವರು ಆರೋಪಿಗಳು, ನೀನು ದನ, ಕೋಣಗಳನ್ನು ಸಾಕಿ ಕಡಿಯಲಿಕ್ಕೆ ಕೊಡುತ್ತೀಯಲ್ವಾ ಎಂದು ಹೇಳಿ ಹಣಕ್ಕಾಗಿ ಪೀಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಮುಲ್ಕಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಅಂಗಾರಗುಡ್ಡೆ ಕೆಂಚನಕೆರೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ಬಂಟ ಸಮುದಾಯದ ಒಬ್ಬರಿಗೆ ಸೇರಿದ ಗದ್ದೆ, ತೋಟದ ಜಾಗ ಮತ್ತು ಮನೆಯನ್ನು ಶಂಸುದ್ದೀನ್ ಎಂಬವರು ಹಲವಾರು ವರ್ಷಗಳಿಂದ ನೋಡಿಕೊಂಡಿದ್ದು, ಶೆಟ್ಟರಿಗೆ ಸೇರಿದ ಮನೆಯ ಹಟ್ಟಿಯಲ್ಲಿ ಏಳೆಂಟು ಕೋಣಗಳನ್ನು ಸಾಕುತ್ತಿದ್ದಾರೆ. ಶಂಸುದ್ದೀನ್ ಮತ್ತು ಅವರ ಮಗ ತಾಜುದ್ದೀನ್ ಕೋಣಗಳನ್ನು ಸಾಕುತ್ತ ಪ್ರತಿ ಕಂಬಳಕ್ಕೂ ಕೋಣಗಳನ್ನು ಒಯ್ಯುತ್ತಿದ್ದಾರೆ.


ಮೊನ್ನೆ ಮುಲ್ಕಿಯಲ್ಲಿ ನಡೆದ ಅರಸು ಕಂಬಳದಲ್ಲಿ ಶಂಸುದ್ದೀನ್ ಅವರ ಕೋಣಗಳಿಗೆ ಬಹುಮಾನ ಸಿಕ್ಕಿತ್ತು. ಹೀಗಾಗಿ ಅಲ್ಲಿ ಸಿಕ್ಕಿರುವ ಬಂಗಾರದ ಸರದ ಜೊತೆಗೆ ಹಣ ಕೊಡಬೇಕೆಂದು ಮೂವರು ಆರೋಪಿಗಳು ನಿನ್ನೆ ಗುರುವಾರ ಸಂಜೆ ಶಂಸುದ್ದೀನ್ ಅವರ ಮನೆಗೆ ಬಂದಿದ್ದರು. ಶಂಸುದ್ದೀನ್ ಮತ್ತು ಅವರ ಮಗ ಕೋಣಗಳನ್ನು ಸ್ನಾನ ಮಾಡಿಸುತ್ತಿದ್ದಾಗ, ಆರೋಪಿಗಳಾದ ಕಾರ್ನಾಡು ನಿವಾಸಿ ಶ್ಯಾಮಸುಂದರ್ ಮತ್ತು ಕೆ.ಎಸ್ ರಾವ್ ನಗರದ ಅಕ್ಷಯ್ ಮತ್ತು ಇನ್ನೊಬ್ಬ ಬಂದಿದ್ದು ಚಿನ್ನದ ಸರ ಮತ್ತು ಹಣ ನೀಡುವಂತೆ ಕೇಳಿದ್ದಾರೆ.
ನೀವು ದನಗಳನ್ನು ಸಾಕಿ ಕಡಿಯಲು ಕೊಡುತ್ತಿದ್ದೀರಿ ಎಂದು ಆರೋಪಿಸಿ ಆರೋಪಿಗಳು ಹಣಕ್ಕಾಗಿ ಪೀಡಿಸಿದ್ದಲ್ಲದೆ, ಶಂಸುದ್ದೀನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆಸುಪಾಸಿನ ಹಿಂದು ನಿವಾಸಿಗಳು ಬಂದು ಶಂಸುದ್ದೀನ್ ಜೊತೆ ಸೇರಿ ಹಲ್ಲೆಯನ್ನು ತಪ್ಪಿಸಿದ್ದಾರೆ. ಅಲ್ಲದೆ, ಹಣ ಕೇಳಿಕೊಂಡು ಬಂದಿದ್ದವರನ್ನು ಓಡಿಸಿದ್ದಾರೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ಯಾಮಸುಂದರ್ ಮತ್ತು ಅಕ್ಷಯ್ ನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆರೋಪಿ ಅಕ್ಷಯ್ ವಿರುದ್ಧ ಮುಲ್ಕಿ ಠಾಣೆಯಲ್ಲಿ ಎರಡು ಕೇಸ್ ಇದೆ.