ಮುಂಬೈ :ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್ ; ಉಗ್ರಗಾಮಿ ಸಂಪರ್ಕ ಇರುವುದಾಗಿ ಹೇಳಿ ಬೆದರಿಕೆ, ಸಾಲ ಮಾಡಿ 1.61 ಕೋಟಿ ಕೊಟ್ಟ ಕಾರವಾರದ ಶಿಕ್ಷಕ !

ಮುಂಬೈ :ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್ ; ಉಗ್ರಗಾಮಿ ಸಂಪರ್ಕ ಇರುವುದಾಗಿ ಹೇಳಿ ಬೆದರಿಕೆ, ಸಾಲ ಮಾಡಿ 1.61 ಕೋಟಿ ಕೊಟ್ಟ ಕಾರವಾರದ ಶಿಕ್ಷಕ !

ಕಾರವಾರ : ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿದ ಸೈಬರ್ ವಂಚಕರು, ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರನ್ನು ಉಗ್ರಗಾಮಿಗಳ ಸಂಪರ್ಕ ಇರುವುದಾಗಿ ಬೆದರಿಸಿ ಬರೋಬ್ಬರಿ 1.61 ಕೋಟಿ ರೂ. ಪಂಗನಾಮ ಹಾಕಿದ್ದಾರೆ. ‌

ಮುಂಡಗೋಡಿನ ಟಿಬೆಟಿಯನ್ ಕಾಲೋನಿ ನಿವಾಸಿ, 72 ವರ್ಷದ ಪಾಲ್ಡೆನ್ ವಂಚನೆಗೆ ಒಳಗಾದವರು. ವಾಟ್ಸಪ್ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಕೋಲಾಬಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂದು ಪರಿಚಯ ಹೇಳಿದ್ದ. ಬಳಿಕ ಮುಂಬೈನಲ್ಲಿ ಅರೆಸ್ಟ್ ಆಗಿರುವ ಉಗ್ರಗಾಮಿ ಸಂಘಟನೆಯ ನಾಯಕನ ಬಳಿ ಪತ್ತೆಯಾದ ನೂರಾರು ಎಟಿಎಂ ಕಾರ್ಡ್‌ಗಳಲ್ಲಿ ನಿಮ್ಮ ಹೆಸರಿನ ಕಾರ್ಡ್ ಇದೆ ಎಂದು ಹೆದರಿಸಿದ್ದು, ನಿಮ್ಮ ಖಾತೆಯಿಂದ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದ. 

ಪೊಲೀಸ್ ಡ್ರೆಸ್​ನಲ್ಲಿ ವಿಡಿಯೋ ಕರೆ 

ವಂಚಕ ವ್ಯಕ್ತಿ ಪೊಲೀಸರ ಸಮವಸ್ತ್ರ ಧರಿಸಿ ವಿಡಿಯೋ ಕರೆ ಮಾಡಿದ್ದು ವೃದ್ಧ ಶಿಕ್ಷಕನನ್ನು ನಂಬಿಕೆ ಬರುವಂತೆ ಮಾಡಿದ್ದ. ಅಲ್ಲದೆ, ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕಳುಹಿಸಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವನ್ನು 'ನ್ಯಾಷನಲ್ ಫಂಡ್'ಗೆ ಜಮಾ ಮಾಡಬೇಕು, ತನಿಖೆ ಮುಗಿದ ಮೇಲೆ ಹಣ ವಾಪಸ್ ನೀಡಲಾಗುವುದು ಎಂದು ನಂಬಿಸಿದ್ದ. ಈ ಬಗ್ಗೆ ಯಾರ ಬಳಿಯೂ ತಿಳಿಸದಂತೆ ಬೆದರಿಸಿದ್ದು, ನೀವು ಡಿಜಿಟಲ್ ಅರೆಸ್ಟ್ ನಲ್ಲಿದ್ದೀರಿ, ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸಪ್ ಮೂಲಕ ವರದಿ ನೀಡುವಂತೆ ಸೂಚಿಸಿದ್ದ.

ಸಾಲ ಮಾಡಿ ಹಣ ಕೊಟ್ಟ ನಿವೃತ್ತ ಶಿಕ್ಷಕ 

ವಂಚಕನ ಮಾತನ್ನು ನಂಬಿದ ಪಾಲ್ಡೆನ್ ತಮ್ಮ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಎಫ್​ಡಿ ಹಣ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಸುಮಾರು 1.61 ಕೋಟಿ ರೂಪಾಯಿಯನ್ನು ಹಂತ ಹಂತವಾಗಿ ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಕೊನೆಗೆ, ಹಾಕಿದ ಹಣ ಹಿಂತಿರುಗಿಸದೇ ಇದ್ದಾಗ ಮೋಸ ಹೋಗಿರುವುದು ತಿಳಿದುಬಂದಿದ್ದು ಕಾರವಾರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article