ಕರ್ನಾಟಕ :ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ ವಯಸ್ಸಿನಲ್ಲಿ ಬರೋಬ್ಬರಿ 702 ಕಿಮೀ ಸೈಕಲ್ ತುಳಿದ ಶಾಸಕ ಸುರೇಶ್ ಕುಮಾರ್..!!!

ಬೆಂಗಳೂರು : ದೇಹ, ಮನಸ್ಸು ಗಟ್ಟಿಯಿದ್ದರೆ, ವಯಸ್ಸು ಸಾಧನೆಗೆ ಅಡ್ಡಿಯಾಗದು ಎಂಬುದನ್ನು ರಾಜಾಜಿನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (70) ತೋರಿಸಿದ್ದಾರೆ. ಕೆಲವು ತಿಂಗಳ ಹಿಂದೆ ತೀವ್ರವಾದ ನರದ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಸುರೇಶ್ ಕುಮಾರ್, ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ ಐದು ದಿನಗಳಲ್ಲಿ ಬರೋಬ್ಬರಿ 702 ಕಿಮೀ ಸೈಕಲ್ ತುಳಿಯುವ ಮೂಲಕ ಹುಬ್ಬೇರಿಸಿದ್ದಾರೆ.
2024ರ ಆಗಸ್ಟ್ ತಿಂಗಳಿನಲ್ಲಿ ಸುರೇಶ್ ಕುಮಾರ್ 'ಚಿಕನ್ ಗುನ್ಯಾ ಎನ್ಸೆಫಲೋಪತಿ' ಎಂಬ ಅಪರೂಪದ ನರದ ಸಮಸ್ಯೆಗೆ ಒಳಗಾಗಿದ್ದರು. ಕಾಯಿಲೆ ಪರಿಣಾಮ ಕೈ ಬೆರಳುಗಳನ್ನು ಅಲುಗಾಡಿಸಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಲ್ಲದೆ, ಹಾಸಿಗೆಯಲ್ಲೇ ಇದ್ದರು. ಛಲ ಬಿಡದೆ 2-3 ತಿಂಗಳ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಚೇತರಿಸಿಕೊಂಡಿದ್ದರು. 2025ರ ಮಾರ್ಚ್‌ನಲ್ಲಿ ಮತ್ತೆ ಸೈಕಲ್ ಸವಾರಿ ಆರಂಭಿಸಿದ್ದ ಸುರೇಶ್ ಕುಮಾರ್, ದೈಹಿಕ ಶಕ್ತಿಯನ್ನು ಮರಳಿ ಪಡೆಯಲು ಯತ್ನಿಸಿದರು. ದೇಹ ಮತ್ತೆ ಸಮಸ್ಥಿತಿಗೆ ಬರಲು ಸೈಕ್ಲಿಂಗ್ ತಮಗೆ ವರದಾನವಾಯಿತು ಎಂದು ಹೇಳಿಕೊಳ್ಳುತ್ತಾರೆ.

ಅನಾರೋಗ್ಯದಿಂದ ಮುಂದೂಡಲ್ಪಟ್ಟಿದ್ದ ಸೈಕಲ್ ಸಾಹಸವನ್ನು ಡಿಸೆಂಬರ್ 2025ರಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ. 'ರಾಜಾಜಿನಗರ ಪೆಡಲ್ ಪವರ್' ತಂಡದ 12 ಸದಸ್ಯರೊಂದಿಗೆ ಡಿಸೆಂಬರ್ 23 ರಂದು ಬೆಳಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು ಕೇವಲ 37 ಗಂಟೆಗಳ ಸೈಕ್ಲಿಂಗ್ ಸವಾರಿಯಲ್ಲಿ ಕನ್ಯಾಕುಮಾರಿ ತಲುಪಿದ್ದಾರೆ.
ಸುರೇಶ್ ಕುಮಾರ್ ಅವರಿಗೆ ಬಾಲ್ಯದಿಂದಲೇ ಸೈಕ್ಲಿಂಗ್ ಎಂದರೆ ಅಚ್ಚುಮೆಚ್ಚು. ವಕೀಲರಾಗಿ ವೃತ್ತಿ ಆರಂಭಿಸಿದ ದಿನಗಳಲ್ಲಿಯೂ ಹೈಕೋರ್ಟ್‌ಗೆ ಸೈಕಲ್‌ನಲ್ಲೇ ಹೋಗುತ್ತಿದ್ದರು. ರಾಜಕೀಯ ಪ್ರವೇಶಿಸಿದ ನಂತರ ಸ್ವಲ್ಪ ಸಮಯ ಬಿಡುವು ಸಿಕ್ಕಿರಲಿಲ್ಲ. ಆದರೆ ಈಗ ಹೊಸ ಉದ್ದೇಶದೊಂದಿಗೆ ಮತ್ತೆ ಸೈಕ್ಲಿಂಗ್ ಆರಂಭಿಸಿದ್ದೇನೆ" ಎನ್ನುತ್ತಾರೆ ಅವರು.
ತಂಡದ ಸದಸ್ಯ ಪ್ರಶಾಂತ್ ಸದಾಶಿವ ಪಾಟೀಲ್ ಮಾತನಾಡಿ, "ಸುರೇಶ್ ಕುಮಾರ್ ಪ್ರಯಾಣದ ಉದ್ದಕ್ಕೂ ಸ್ಫೂರ್ತಿದಾಯಕ ಕಥೆಗಳನ್ನು ಹೇಳುತ್ತಾ ತಂಡದ ಒಗ್ಗಟ್ಟನ್ನು ಕಾಯ್ದುಕೊಂಡರು. ಪ್ರತಿಯೊಂದು ಕ್ಷೇತ್ರವೂ ಸೈಕ್ಲಿಂಗ್ ಅನ್ನು ಪ್ರೋತ್ಸಾಹಿಸುವ ಅಗತ್ಯವಿದೆ" ಎಂದರು. ಗಂಭೀರ ಅನಾರೋಗ್ಯದಿಂದ ಗುಣಮುಖರಾಗಿ 70ರ ವಯಸ್ಸಿನಲ್ಲಿ ಸಾಹಸ ಮಾಡಿರುವುದು ಹುಬ್ಬೇರಿಸುವಂತಾಗಿದೆ.