ಮಂಗಳೂರು :ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರ ತಪಾಸಣೆ, 25 ವಿದ್ಯಾರ್ಥಿಗಳು ಸೇರಿ 52 ಜನ ಡ್ರಗ್ ಪಾಸಿಟಿವ್ ಪತ್ತೆ, ಇಬ್ಬರು ಪೆಡ್ಲರ್ ಅರೆಸ್ಟ್...!!!

ಮಂಗಳೂರು : ನ್ಯೂ ಈಯರ್ ಸಂಭ್ರಮಾಚರಣೆ ನಡುವೆ ಮಂಗಳೂರು ಪೊಲೀಸರು ಅನುಮಾನದ ಮೇಲೆ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು 52 ಜನ ಡ್ರಗ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ಮಂಗಳೂರು ನಗರ ಪೊಲೀಸರು ಆಯಾ ಠಾಣೆ ವ್ಯಾಪ್ತಿಯಲ್ಲಿ ಡಿ.31ರ ರಾತ್ರಿ ತಪಾಸಣೆ ಕೈಗೊಂಡಿದ್ದಾರೆ. ವಾಹನ ಪ್ರಯಾಣಿಕರು, ಪಾರ್ಟಿ ಆಯೋಜನೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು ಈ ವೇಳೆ 52 ಮಂದಿ ಡ್ರಗ್ಸ್ ಸೇವಿಸಿರುವುದು ಕಂಡುಬಂದಿದೆ. ಇದರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದು ಇಬ್ಬರು ಸ್ಥಳೀಯರು ಮತ್ತು 23 ಹೊರ ಜಿಲ್ಲೆಯವರು. 27 ಮಂದಿ ಬೇರೆ ಬೇರೆ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದವರು, 17 ಮಂದಿ ಕಾರ್ಮಿಕರಿದ್ದಾರೆ.
ಡ್ರಗ್ಸ್ ಸೇವಿಸಿದವರಿಗೆ ಕೌನ್ಸೆಲಿಂಗ್ ಮತ್ತು ಸೂಕ್ತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ, ಮಂಗಳೂರು ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ ಗಳನ್ನೂ ವಶಕ್ಕೆ ಪಡೆದಿದ್ದಾರೆ. ಡಿ.30ರಂದು 50 ಗ್ರಾಮ್ ಎಂಡಿಎಂಎ ಒಬ್ಬನನ್ನು ಮತ್ತು 200 ಗ್ರಾಮ್ ಎಂಡಿಎಂಎ ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ಮೂವರು ಕೂಡ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಪೊಲೀಸರು ಇವರ ಚಲನವಲನ ಬಗ್ಗೆ ನಿಗಾ ಇಟ್ಟಿದ್ದರು. ಮಂಗಳೂರಿನ ಜನರು ಮತ್ತು ಹಲವು ಸಂಘಟನೆಗಳ ಸಹಯೋಗದಲ್ಲಿ ಡ್ರಗ್ಸ್ ಫ್ರೀ ನಗರವನ್ನಾಗಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.