ದೆಹಲಿ :ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್ತಡ ಬೆನ್ನಲ್ಲೇ 600 ಖಾತೆ ಡಿಲೀಟ್ ಮಾಡಿದ ಎಲಾನ್ ಮಸ್ಕ್ ಕಂಪನಿ...!!!

ನವದೆಹಲಿ: ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಜಾಲತಾಣ (ಗ್ರೋಕ್) ಅಶ್ಲೀಲ ಕಂಟೆಂಟ್ ವಿವಾದಕ್ಕೆ ಸಂಬಂಧಿಸಿ ಕೊನೆಗೂ ಕೇಂದ್ರ ಸರ್ಕಾರದ ಒತ್ತಾಯಕ್ಕೆ ಮಣಿದಿದ್ದು, ವಿವಾದಿತ ಕಟೆಂಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದ 600 ಖಾತೆಗಳನ್ನು ಡಿಲೀಟ್ ಮಾಡಿದೆ. ಅಶ್ಲೀಲ ವಿಷಯದ ಕುರಿತು ಎಕ್ಸ್ ವೇದಿಕೆಗೆ ಐಟಿ ಸಚಿವಾಲಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೈಕ್ರೋಬ್ಲಾಗಿಂಗ್ ಸೈಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ.
ಸುಮಾರು 3,500 ವಿಷಯಗಳ ತುಣುಕುಗಳನ್ನು ನಿರ್ಬಂಧಿಸಿ ಅಶ್ಲೀಲ ಕಂಟೆಂಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದ 600ಕ್ಕೂ ಹೆಚ್ಚು ಖಾತೆಗಳನ್ನು ಡಿಲೀಟ್ ಮಾಡಿದೆ. ಭವಿಷ್ಯದಲ್ಲಿ ಎಕ್ಸ್ ವೇದಿಕೆಯು ಅಶ್ಲೀಲ ಚಿತ್ರಣವನ್ನು ಅನುಮತಿಸುವುದಿಲ್ಲ ಎಂದೂ ಸರ್ಕಾರಕ್ಕೆ ಭರವಸೆ ನೀಡಿದೆ.
ಇದಕ್ಕೂ ಮೊದಲು, ಸರ್ಕಾರವು ಎಕ್ಸ್ ನಿಂದ Grok AI ಗೆ ಲಿಂಕ್ ಮಾಡಲಾದ ಅಶ್ಲೀಲ ವಿಷಯದ ಮೇಲೆ ತೆಗೆದುಕೊಂಡ ನಿರ್ದಿಷ್ಟ ಕ್ರಮದ ಬಗ್ಗೆ ಕೇಳಿತ್ತು. ಜನವರಿ 2ರಂದು, 'ಗ್ರೋಕ್' ಮತ್ತು ಇತರ ಪರಿಕರಗಳ AI-ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಸಭ್ಯ ಮತ್ತು ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಉತ್ಪಾದಿಸುತ್ತಿರುವ ಬಗ್ಗೆ ಐಟಿ ಸಚಿವಾಲಯವು X ಗೆ ಕಠಿಣ ಎಚ್ಚರಿಕೆ ನೀಡಿತ್ತು.