ಬೆಳ್ತಂಗಡಿ: ಕೆರೆಯಲ್ಲಿ 15 ವರ್ಷದ ಬಾಲಕನ ಶವ ಪತ್ತೆ; ತಲೆಗೆ ಗಂಭೀರ ಗಾಯ, ಕೊಲೆ ಶಂಕೆ..!!
ಬೆಳ್ತಂಗಡಿ: ದೇವಸ್ಥಾನಕ್ಕೆಂದು ಹೋಗಿದ್ದ ಬಾಲಕನ ಶವ ಸಂಶಯಾಸ್ಪದ ರೀತಿಯಲ್ಲಿ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ಇಂದು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ಎಂಬಲ್ಲಿ ನಡೆದಿದೆ.
ಸಂಬೋಳ್ಯ ಎಂಬಲ್ಲಿಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢ ಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದಿನಂತೆ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಧನು ಪೂಜೆಗಾಗಿ ಬೆಳಗ್ಗೆ 5ರ ಸುಮಾರಿಗೆ ಮನೆಯಿಂದ ತೆರಳಿದ್ದಾನೆ. ಆದರೆ ಅತ್ತ ದೇವಸ್ಥಾನಕ್ಕೂ ಹೋಗದೆ, ಮನೆಗೂ ಹಿಂದಿರುಗದೇ ಇದ್ದಾಗ ಮನೆಯವರು ಗಾಬರಿಗೊಂಡು ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಬಾಲಕ ಹೋಗಿದ್ದ ದಾರಿಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಚಿರತೆ ಕೊಂಡೊಯ್ದಿರಬಹುದು ಎಂಬ ಸಂಶಯ ಸ್ಥಳೀಯರಲ್ಲಿ ಮೂಡಿತ್ತು. ತಕ್ಷಣ ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತಲೆಯ ಹಿಂಭಾಗ ಗಂಭೀರ ರೀತಿಯಲ್ಲಿ ಎರಡು ಗಾಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನ ದಳ, ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ನಂತರ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಅರುಣ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ, "ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೇರುಕಟ್ಟೆ ಎಂಬಲ್ಲಿ ಇಂದು 15 ವರ್ಷದ ಸುಮಂತ್ ಎಂಬ ಬಾಲಕನ ಶವ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಾಲಕ ವಾರಕ್ಕೊಮ್ಮೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗುವುದು ಇತ್ತು. ಇವತ್ತು ಅದೇ ರೀತಿ 5 ಗಂಟೆಗೆ ಮನೆ ಬಿಟ್ಟಿದ್ದ. ಆದರೆ ಮನೆಯಿಂದ ಸುಮಾರು 500 ಮೀಟರ್ ದೂರದ ಸಣ್ಣ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪಕ್ಕದಲ್ಲೇ ರಕ್ತದ ಗುರುತುಗಳು ಇತ್ತು. ತಲೆಗೆ ಆಗಿರುವ ಗಾಯ ಕೆರೆಗೆ ಬಿದ್ದು ಆಗಿರುವುದಾ ಅಥವಾ ಬೇರೆಯದ್ದಾ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ರೀತಿಯಲ್ಲಿ ತನಿಖೆ ನಡೆಸಲಾಗುವುದು" ಎಂದರು.
ಡಿವೈಎಸ್ಪಿ ರೋಹಿಣಿ ಸಿ.ಕೆ., ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್ ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ಆರಂಭದಲ್ಲಿ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದರೂ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂದು ಬಹುತೇಕ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.