ದೆಹಲಿ :ಮಾನಸಿಕ ಕಾಯಿಲೆಗಳ ಬಗ್ಗೆ ತಪ್ಪು ಕಲ್ಪನೆಗಳು ಬೇಡ, ರೋಗಿಗಳನ್ನು ದೂರವಿಡುವುದು ತಪ್ಪು: ಡಾ.ಸವಿತಾ ಮಲ್ಹೋತ್ರಾ..!!!
ದೆಹಲಿ :ಕುಟುಂಬದಲ್ಲಿ ಯಾರಿಗಾದರೂ ಹೃದಯ ಇಲ್ಲವೇ ಕಿಡ್ನಿ ಸಮಸ್ಯೆಗಳು ಉಂಟಾದರೆ ಜನರು ಕಾಳಜಿಯಿಂದ ಅವರನ್ನು ಭೇಟಿ ಮಾಡಲು ಧಾವಿಸುತ್ತಾರೆ. ರೋಗಗಳಿಗೆ ಆರ್ಥಿಕ ಹಾಗೂ ಭಾವನಾತ್ಮಕ ಬೆಂಬಲ ನೀಡುತ್ತಾರೆ. ಚಿಕಿತ್ಸೆಯ ಪ್ರಗತಿಯ ಬಗ್ಗೆ ಆಗಾಗ್ಗೆ ವಿಚಾರಿಸುತ್ತಾರೆ.
ಆದರೆ, ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದರೆ, ಜನರು ಭಯಭೀತರಾಗುತ್ತಾರೆ. ರೋಗಿಗಳ ಹಾಗೂ ಅವರ ಕುಟುಂಬಗಳಿಂದ ದೂರವಾಗುತ್ತಾರೆ. ಬೆಂಬಲ ನೀಡಲು ಅವರು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಈ ಮನೋಭಾವ ಬದಲಾಗಬೇಕು ಎನ್ನುತ್ತಾರೆ ಖ್ಯಾತ ಮನೋವೈದ್ಯೆ ಡಾ.ಸವಿತಾ ಮಲ್ಹೋತ್ರಾ.
ವರ್ಲ್ಡ್ ಅಸೋಸಿಯೇಷನ್ ಫಾರ್ ಸೋಶಿಯಲ್ ಸೈಕಿಯಾಟ್ರಿಯಿಂದ 'ದಿ ಈವ್ ಪೆಲಿಸಿಯರ್ ಪ್ರಶಸ್ತಿ' ಪಡೆದ ಹಾಗೂ ಭಾರತೀಯ ಮನೋವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಸವಿತಾ ಮಲ್ಹೋತ್ರಾ ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಮನೋರೋಗಿಗಳನ್ನು ಇತರ ಯಾವುದೇ ಸಾಮಾನ್ಯ ಕಾಯಿಲೆ ಇರುವ ಜನರಂತೆ ಪರಿಗಣಿಸಬೇಕು ಎಂದು ಹೇಳಿದರು.
. ದೇಶದಲ್ಲಿ ಹೆಚ್ಚುತ್ತಿರುವ ಯುವಜನರ ಆತ್ಮಹತ್ಯೆ ಕಳವಳಕಾರಿ. ಇದಕ್ಕೆ ಮಾನಸಿಕ ಆರೋಗ್ಯ ಸಮಸ್ಯೆಗಳು ಎಷ್ಟರ ಮಟ್ಟಿಗೆ ಕಾರಣವಾಗಿವೆ?
ನಮ್ಮ ದೇಶದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತಿವೆ. ಪ್ರತಿವರ್ಷ ಲಕ್ಷ ಜನಸಂಖ್ಯೆಗೆ 21 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ತೋರಿಸುವ ಅಂಕಿಅಂಶಗಳು ತೀವ್ರವಾಗಿ ಆತಂಕಕಾರಿ. ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಆತ್ಮಹತ್ಯೆಗೆ ಕಾರಣವಾಗಿವೆ. COVID-19 ಬಳಿಕ ಈ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಯುವಕರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ. ಒತ್ತಡದ ಜೀವನಶೈಲಿ, ಕುಟುಂಬ ಸಂಘರ್ಷಗಳು ಹಾಗೂ ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಬಹುತೇಕ ಎಲ್ಲರೂ ಒಂದು ಹಂತದಲ್ಲಿ ಒತ್ತಡ, ಆತಂಕ ಹಾಗೂ ಉದ್ವೇಗ ಅನುಭವಿಸುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿದ ಸ್ಪರ್ಧೆಯಿಂದಾಗಿ ವಿದ್ಯಾರ್ಥಿಗಳು ಅಪಾರ ಒತ್ತಡದಲ್ಲಿದ್ದಾರೆ. ಉದ್ಯೋಗ ಅಭದ್ರತೆಯಿಂದಾಗಿ ಯುವಜನರು ತೀವ್ರ ಒತ್ತಡ ಎದುರಿಸುತ್ತಿದ್ದಾರೆ ಎಂದು ಡಾ.ಸವಿತಾ ಮಲ್ಹೋತ್ರಾ ಹೇಳಿದರು.
2. ಬದಲಾಗುತ್ತಿರುವ ಜೀವನಶೈಲಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆಯೇ?:
ಇತ್ತೀಚೆಗೆ, ಪಟ್ಟಣಗಳು ಮತ್ತು ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳನ್ನು ಅನುಕರಿಸುವ ಪ್ರವೃತ್ತಿ ಹೆಚ್ಚಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿರುವುದರಿಂದ ಹಾಗೂ ಮಕ್ಕಳು ಅಧ್ಯಯನ, ಉದ್ಯೋಗಗಳಿಗಾಗಿ ದೂರದಲ್ಲಿ ವಾಸಿಸುತ್ತಿರುವುದರಿಂದ ಮಾನಸಿಕ ಒತ್ತಡ ಹಾಗೂ ಆತಂಕಗಳನ್ನು ಹಂಚಿಕೊಳ್ಳಲು ಜನರ ಕೊರತೆಯಿದೆ. ಅದಕ್ಕಾಗಿಯೇ ನಾವು ನಮ್ಮ ವಿಶಿಷ್ಟ ಜೀವನ ವಿಧಾನವನ್ನು ತ್ಯಜಿಸಬಾರದು. ಮತ್ತೊಂದೆಡೆ, ಪರಿಸರ ಮಾಲಿನ್ಯವು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದರು.
. ನಮ್ಮಲ್ಲಿ ಮಾನಸಿಕ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸಾ ವಿಧಾನಗಳಿವೆಯೇ? ಸಂಬಂಧಿತ ವೈದ್ಯರಿಗೆ ಯಾವ ರೀತಿಯ ಬೆಂಬಲ ಲಭ್ಯವಿದೆ?
ನಾವು ಔಷಧಿಗಳೊಂದಿಗೆ ಅನೇಕ ರೀತಿಯ ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ಸಮರ್ಥರಾಗಿದ್ದೇವೆ. ದುರದೃಷ್ಟವಶಾತ್, ಯಾರಾದರೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ, ಅವರನ್ನು ಹೆಚ್ಚಾಗಿ ಬಹಿಷ್ಕರಿಸಲಾಗುತ್ತದೆ. ಜನರು ಅವರೊಂದಿಗೆ ಸ್ನೇಹ ಬೆಳೆಸಲು ಹಿಂಜರಿಯುತ್ತಾರೆ. ಇತರ ಕಾಯಿಲೆಗಳಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆಗಳಿವೆ ಹಾಗೂ ಅವುಗಳನ್ನು ಖಂಡಿತವಾಗಿಯೂ ಗುಣಪಡಿಸಬಹುದು. ನಮ್ಮ ಸಮಾಜದಲ್ಲಿ, ರೋಗಿಗಳನ್ನು ಮಾತ್ರವಲ್ಲದೆ ಮನೋವೈದ್ಯರನ್ನೂ ವಿಚಿತ್ರವಾಗಿ ನೋಡಲಾಗುತ್ತದೆ. ಅವರನ್ನು 'ಹುಚ್ಚು ಜನರ ವೈದ್ಯರು' ಎಂದು ಕರೆಯಲಾಗುತ್ತದೆ. ಈ ರೀತಿ ಹೇಳುವುದು ಸರಿಯಲ್ಲ.
ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ನಾವು ಅಪಹಾಸ್ಯ ಮಾಡುವುದಿಲ್ಲ ಅಲ್ಲವೇ? ಹಾಗಾದರೆ, ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಏಕೆ ದೂಷಿಸಬೇಕು? ರೋಗಿಗಳನ್ನು ಪ್ರತ್ಯೇಕಿಸುವುದು, ಅವರನ್ನು ಕೆಲಸ ಮಾಡದಂತೆ ನಿರ್ಬಂಧಿಸುವುದು ತಪ್ಪು. ಅವರ ವಿರುದ್ಧ ಯಾವುದೇ ಸಾಮಾಜಿಕ ತಾರತಮ್ಯ ಇರಬಾರದು ಎಂದು ಡಾ.ಸವಿತಾ ಮಲ್ಹೋತ್ರಾ ತಿಳಿಸಿದರು.
4. ನಮ್ಮ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಮನೋವೈದ್ಯಕೀಯ ಕೋರ್ಸ್‌ಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿವೆಯೇ? ಸದ್ಯದ ಪಠ್ಯಕ್ರಮ ಸಾಕಾಗುತ್ತದೆಯೇ?
ಇದು ವೈದ್ಯಕೀಯ ಕಾಲೇಜುಗಳಲ್ಲಿ ನಾನು ಗಮನಿಸಿದ ಕೊರತೆಯಾಗಿದೆ. ಮನೋವೈದ್ಯಕೀಯ ಕೋರ್ಸ್‌ಗಳಿಗೆ ಇನ್ನೂ ಹಳೆಯ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ರೋಗಿಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡುವ ಹಾಗೂ ಅವರ ಮೆದುಳಿನಲ್ಲಿ ಆಗುತ್ತಿರುವ ಬದಲಾವಣೆಗಳು, ಅವರ ನರಮಂಡಲದಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಆಧಾರದ ಮೇಲೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಬೇಕು.
ನಾವು ಭಾರತೀಯ ಮನೋವೈದ್ಯಕೀಯ ಸಮಾಜದ ಮೂಲಕ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇತರ ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳು ಹೊರಹೊಮ್ಮಿವೆ. ಅದೇ ರೀತಿಯಾಗಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಅವರನ್ನು ಪರಿಚಯಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.
5. ಇತ್ತೀಚೆಗೆ ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಡಿಜಿಟಲ್ ಸ್ಕ್ರೀನ್ ಸಮಯ ಗಮನಾರ್ಹವಾಗಿ ಹೆಚ್ಚಾಗಿದೆ. ಇದರ ಋಣಾತ್ಮಕ ಪರಿಣಾಮಗಳೇನು?
ಇಂದಿನ ಕಾಲದಲ್ಲಿ ಡಿಜಿಟಲ್ ಸ್ಕ್ರೀನ್ ಸಮಯವು ಜನರಿಗೆ ವ್ಯಸನವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಮೊಬೈಲ್ ಫೋನ್‌ಗಳನ್ನು ನೋಡುವ ಸಮಯ ಗಣನೀಯವಾಗಿ ಹೆಚ್ಚಾಗಿದೆ. ಮೂರು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಂದರ್ಭದಲ್ಲೂ ಮೊಬೈಲ್ ಫೋನ್‌ಗಳನ್ನು ನೀಡಬಾರದು. ಇದು ಅವರಲ್ಲಿ 'ವರ್ಚುವಲ್ ಆಟಿಸಂ' ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಬಹುದು. ಮೊಬೈಲ್ ಫೋನ್ ನೋಡುವಾಗ ಕರೆ ಮಾಡಿದಾಗ, ಅವರು ಪ್ರತಿಕ್ರಿಯಿಸುವುದಿಲ್ಲ. ಅವರ ಏಕಾಗ್ರತೆ ಕಡಿಮೆಯಾಗುತ್ತದೆ. ಮಾತಿನ ಬೆಳವಣಿಗೆಯ ವಿಳಂಬದ ಅಪಾಯವಿದೆ. ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸಹ ನೇರವಾಗಿ ಮೊಬೈಲ್ ಫೋನ್‌ಗಳನ್ನು ನೀಡಬಾರದು. ದಿನಕ್ಕೆ 10ರಿಂದ 15 ನಿಮಿಷಗಳ ಕಾಲ, ವಯಸ್ಕರು ಅವರನ್ನು ಅವರ ಪಕ್ಕದಲ್ಲಿ ಕೂರಿಸಿ ಮನರಂಜನೆ ಹಾಗೂ ಶೈಕ್ಷಣಿಕ ವಿಷಯವನ್ನು ಮಾತ್ರ ತೋರಿಸಬೇಕು. ಚಿಕ್ಕ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು, ಅವರು ದೈಹಿಕ ಆಟಗಳನ್ನು ಆಡಲು ಪ್ರೋತ್ಸಾಹಿಸಬೇಕು. ಅವರಿಗೆ ಬಣ್ಣಗಳ ನೈಜ ಪ್ರಪಂಚ ತೋರಿಸಬೇಕು. ಆಗ ಮಾತ್ರ ಅವರನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲಾಗುತ್ತದೆ ಎಂದು ಡಾ.ಸವಿತಾ ಮಲ್ಹೋತ್ರಾ ವಿವರಿಸಿದರು.
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ