ಮಂಗಳೂರು: RTO ಕಚೇರಿಗೆ ಬಾಂಬ್ ಬೆದರಿಕೆ ; ಸಿಬಂದಿ ತೆರವುಗೊಳಿಸಿ ತಪಾಸಣೆ, ಎಲ್ಟಿಟಿಟಿಇ ಉಗ್ರರನ್ನು ಬಳಸಿ ಸ್ಫೋಟ, ಭ್ರಷ್ಟಾಚಾರ ತಪ್ಪಿಸಲು ತಮಿಳುನಾಡು ಡಿಜಿಪಿ, ಸಚಿವ ಉದಯನಿಧಿ ಸಂಚು...!!!

ಮಂಗಳೂರು: ನಗರದ ನೆಹರು ಮೈದಾನ ಬಳಿಯಿರುವ ಆರ್ ಟಿಓ ಕಚೇರಿಯಲ್ಲಿ ಐದು ಬಾಂಬ್ ಗಳನ್ನು ಇಡಲಾಗಿದೆ, ಶೀಘ್ರದಲ್ಲೇ ಸ್ಫೋಟಿಸಲಾಗುವುದು ಎಂದು ಇಮೇಲ್ ಮೂಲಕ ಮಂಗಳೂರು ಆರ್ ಟಿಓ ಕಚೇರಿಗೆ ಬೆದರಿಕೆ ಹಾಕಲಾಗಿದೆ. ನಿನ್ನೆ ರಾತ್ರಿ ಇಮೇಲ್ ಸಂದೇಶ ಬಂದಿದ್ದು ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮೇಲ್ ಸಂದೇಶವನ್ನು ಗಮನಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಇದರ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯ ದಳದವರು ಆಗಮಿಸಿ ತುರ್ತಾಗಿ ಅಲ್ಲಿನ ಸಿಬಂದಿಯನ್ನು ತೆರವುಗೊಳಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲ ಕಡೆ ಶೋಧ ಕಾರ್ಯ ನಡೆಸಿದ್ದು, ಯಾವುದೇ ಬಾಂಬ್ ಮಾದರಿ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.




ಇಮೇಲ್ ಸಂದೇಶದಲ್ಲಿ ಪಾಕಿಸ್ತಾನದ ಐಎಸ್ಐ ಘಟಕದ ತಮಿಳುನಾಡು ವಿಭಾಗವು ಎಲ್ಟಿಟಿಟಿಇಯಲ್ಲಿದ್ದ ಮಾಜಿ ಉಗ್ರರನ್ನು ಬಳಸಿಕೊಂಡು ಈ ಸ್ಫೋಟವನ್ನು ನಡೆಸಲಿದೆ. ತಮಿಳುನಾಡು ಡಿಜಿಪಿ ಅಭಯ್ ಕುಮಾಯರ್ ಸಿಂಗ್ ಮತ್ತು ಡೇವಿಡ್ಸನ್ ದೇವಸ್ರೀವತ್ಸನ್ ಐಪಿಎಸ್ ಇವರು ಸೇರಿಕೊಂಡು ತಮಿಳುನಾಡು ಸರ್ಕಾರದ ಭ್ರಷ್ಟಾಚಾರದ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಈ ಕೃತ್ಯವನ್ನು ನಡೆಸಲು ಮುಂದಾಗಿದ್ದಾರೆ.
ತಮಿಳುನಾಡು ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಬಿಜೆಪಿ ಮುಂದಾಗಿದೆ. ಮುಂದಿನ ವರ್ಷ ತಮಿಳುನಾಡು ಚುನಾವಣೆ ನಡೆಯುವುದರಿಂದ ಭ್ರಷ್ಟಾಚಾರದ ಬಗ್ಗೆ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಸಚಿವ ಉದಯನಿಧಿಯವರೇ ಎಲ್ಟಿಟಿಟಿಇ ಉಗ್ರರೊಂದಿಗೆ ಸೇರಿ ಸಂಚು ನಡೆಸಿದ್ದಾರೆ. ಎಲ್ಟಿಟಿಟಿಇ ಉಗ್ರ ಸಂಘಟನೆಯ ನಿವೇದಾ ಪೆತ್ತುರಾಜ್ ಹೂಡಿರುವ ಎರಡು ಸಂಚುಗಳಲ್ಲಿ ಇದೊಂದಾಗಿದೆ. ಆರ್ ಟಿಓ ಕಚೇರಿ ಮತ್ತು ಅಲ್ಲಿನ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿದ್ದು, ದೊಡ್ಡ ಮಟ್ಟದ ಹಾನಿಯೆಸಗಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಕೂಡಲೇ ಕಚೇರಿಯಿಂದ ಸಿಬಂದಿ ಮತ್ತು ಜನರನ್ನು ತೆರವು ಮಾಡಿ. ಅಲ್ಲದೆ, ಇಲೆಕ್ಟ್ರಿಕ್ ಸಿಸ್ಟಮನ್ನೂ ಡಿಟೋನೇಟರ್ ಬಾಂಬ್ ಕನೆಕ್ಟ್ ಮಾಡಿದ್ದು, ಕೂಡಲೇ ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿರಿ.
ಎಲ್ಟಿಟಿಟಿಇ ಕೋಡ್ ವರ್ಡ್ ಪಡೆಯಲು ತಮಿಳುನಾಡು ರಾಜ್ಯಪಾಲರ ಕಚೇರಿಯನ್ನು ಸಂಪರ್ಕಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಿ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕೊನೆಯಲ್ಲಿ ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್ ಎಂದು ಬರೆದಿದ್ದಾರೆ. ತನ್ನ ವಿಳಾಸವನ್ನು ಆರ್ನ ಅಶ್ವಿನ್ ಸೇಕರ್, ಚೇಂಜ್ 29, 5ನೇ ಕ್ರಾಸ್, ಮೈಲಾಪೂರ್, ಪೆರಿಯಾರ್ – ಅಂಬೇಡ್ಕರ್ ರಸ್ತೆ ಎಂದು ಬರೆಯಲಾಗಿದೆ. ಆರ್ನ ಅಸ್ವಿನ್ ಸೇಕರ್ ಹೆಸರಲ್ಲಿ ಇಮೇಲ್ ಸಂದೇಶ ಬಂದಿದ್ದು, ಕೂಡಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿ ತಪಾಸಣೆ ನಡೆಸಿದ್ದಾರೆ.