ಉತ್ತರಪ್ರದೇಶ :ಸಾಕು ನಾಯಿಗೆ ಅನಾರೋಗ್ಯ: ನೊಂದು ಅಕ್ಕ ತಂಗಿ ಆತ್ಮಹತ್ಯೆ; ಇದೇ ನೋವಲ್ಲಿ 3 ದಿನದ ಬಳಿಕ ಪ್ರಾಣಬಿಟ್ಟ ಶ್ವಾನ!
ಉತ್ತರ ಪ್ರದೇಶ: ಇದು ಸಾಕು ನಾಯಿ ಮತ್ತು ಮಾನವರ ನಡುವಿನ ಬಾಂಧವ್ಯದ ದುರಂತ ಕಥೆ. ಮಗನಂತೆ ಸಾಕಿದ್ದ ಸಾಕು ನಾಯಿ ಅನಾರೋಗ್ಯಕ್ಕೀಡಾಗಿದೆ ಎಂದು ನೊಂದು ಇಬ್ಬರು ಯುವತಿಯರು ಪ್ರಾಣ ಬಿಟ್ಟಿದ್ದಾರೆ. ಇನ್ನು ಶ್ವಾನ ಕೂಡ ಇದೇ ನೋವಿನಲ್ಲಿ ಕೊನೆಯುಸಿರೆಳೆದಿದೆ.
ತಮ್ಮ ಪ್ರೀತಿಯ ಸಾಕು ನಾಯಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿಲ್ಲ ಎಂದು ಅಕ್ಕ-ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಇದೇ ನೋವಿನಲ್ಲಿ ಮೂರು ದಿನಗಳಲ್ಲಿ ಸಾಕು ನಾಯಿ ಕೂಡ ಪ್ರಾಣ ಬಿಟ್ಟ ಮನಕಲಕುವ ಘಟನೆ ಉತ್ತರ ಪ್ರದೇಶದ ಲಕ್ನೋದ ಪ್ಯಾರಾ ಪ್ರದೇಶದಲ್ಲಿ ಡಿಸೆಂಬರ್ 24ರಂದು ನಡೆದಿದೆ.
ಲಕ್ನೋದ ಪ್ಯಾರಾ ಪ್ರದೇಶದ ಜಲಾಲ್‌ಪುರ ಗ್ರಾಮದ ನಿವಾಸಿಗಳಾದ ರಾಧಾ (27) ಮತ್ತು ಜಿಯಾ (24) ಮೃತ ಸಹೋದರಿಯರು. ಪ್ರೀತಿಯ ಸಾಕು ನಾಯಿ ಟೋನಿ (ಜರ್ಮನ್ ಶೆಫರ್ಡ್) ಅನಾರೋಗ್ಯದಿಂದ ಬಳಲುತ್ತಿತ್ತು. ನಾಯಿಯ ನೋವನ್ನು ನೋಡಿ ಸಹಿಸಲಾಗದ ಇಬ್ಬರು ಸಹೋದರಿಯರು ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಬಳಿಕ ಟೋನಿ ಕೂಡ ಈ ಅಗಲಿಕೆಯನ್ನು ಸಹಿಸಲಾರದೆ ಮೂರು ದಿನಗಳ ನಂತರ ಶನಿವಾರ ಸಾವನ್ನಪ್ಪಿದೆ.
ಆತ್ಮಹತ್ಯೆಗೂ ಮುನ್ನ ಇಬ್ಬರು ಸಹೋದರಿಯರು ತಮ್ಮ ತಾಯಿ ಗುಲಾಬ್ ದೇವಿಗೆ, "ನಾವು ಸತ್ತ ನಂತರ, ಟೋನಿಯನ್ನು ಮನೆಯಿಂದ ಓಡಿಸಬೇಡಿ. ಅವನಿಗೆ ಚಿಕಿತ್ಸೆ ನೀಡಿ" ಎಂದು ಮನವಿ ಮಾಡಿದ್ದರು. ತಮ್ಮ ಹೆಣ್ಣುಮಕ್ಕಳ ಕೊನೆಯ ಆಸೆಯನ್ನು ಈಡೇರಿಸಲು ಕುಟುಂಬವು ಟೋನಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಗಂಭೀರ ಹೊಟ್ಟೆಯ ಕಾಯಿಲೆ ಮತ್ತು ತನ್ನ ಇಬ್ಬರು ಅಕ್ಕಂದಿರ ಅಗಲಿಕೆ ನೋವಿನಿಂದ ಟೋನಿ ಕೂಡ ಕೊನೆಯುಸಿರೆಳೆದಿದೆ.
ಪ್ಯಾರಾ ಪೊಲೀಸ್ ಠಾಣೆ ಪ್ರದೇಶದ ಜಲಾಲ್ಪುರ್ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯಿಂದ ಸ್ಥಳೀಯರು ದಿಗ್ಭ್ರಮೆಗೊಂಡಿದ್ದಾರೆ. ಕುಟುಂಬವು ರಾಧಾ ಮತ್ತು ಜಿಯಾರ ಅಂತ್ಯಕ್ರಿಯೆಯನ್ನು ನಡೆಸಿದಂತೆಯೇ, ಟೋನಿಗೆ ಸಹ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.
ಮೃತರ ತಾಯಿ ಗುಲಾಬ್ ದೇವಿ, "ರಾಧಾ ಮತ್ತು ಜಿಯಾ ಒಂಬತ್ತು ವರ್ಷಗಳ ಹಿಂದೆ ಟೋನಿ ಕೇವಲ ಒಂದು ತಿಂಗಳ ಮರಿಯಿದ್ದಾಗ ಮನೆಗೆ ಕರೆತಂದರು. ಇಬ್ಬರು ಸಹೋದರಿಯರು ಟೋನಿಯನ್ನು ತಮ್ಮ ಸ್ವಂತ ಮಗುವಿನಂತೆ ಸಾಕಿದ್ದರು. ಅವನು ಅವರೊಂದಿಗೆ ಮಲಗುತ್ತಿದ್ದನು, ಅವರೊಂದಿಗೆ ಎಲ್ಲೆಡೆ ಹೋಗುತ್ತಿದ್ದ. ಟೋನಿಯ ಆರೋಗ್ಯವು ಒಂದು ತಿಂಗಳ ಹಿಂದೆ ಹದಗೆಡಲು ಪ್ರಾರಂಭಿಸಿತು. ಎಲ್ಲಾ ಚಿಕಿತ್ಸೆ ನೀಡಿದರೂ, ಯಾವುದೇ ಸುಧಾರಣೆ ಆಗದಿದ್ದಾಗ, ಇಬ್ಬರು ಸಹೋದರಿಯರು ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಮುಖ್ಯ ಕಾರಣ ತಮ್ಮ ಸಾಕುಪ್ರಾಣಿಯ ಮೇಲಿನ ಅವರ ಅತಿಯಾದ ಬಾಂಧವ್ಯ ಮತ್ತು ಅದರ ಅನಾರೋಗ್ಯದಿಂದ ಉಂಟಾದ ದುಃಖ. ಮರಣೋತ್ತರ ಪರೀಕ್ಷೆಯ ನಂತರ ಇಬ್ಬರು ಸಹೋದರಿಯರ ಶವಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು ಎಂದು ಇನ್ಸ್‌ಪೆಕ್ಟರ್ ಸುರೇಶ್ ಸಿಂಗ್ ತಿಳಿಸಿದ್ದಾರೆ.