ಉಡುಪಿ: ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ; ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ..!!

ಉಡುಪಿ: ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ; ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ..!!

ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ ನೌಕರರು ಭಾರತದ ನೌಕಾಪಡೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್​ನ ಆನಂದ ತಾಲೂಕಿನ ಕೈಲಾಸ್​ನಗರಿಯ ಹೀರೇಂದ್ರ ಕುಮಾರ್ (34) ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಕಳೆದ ನವೆಂಬರ್​ 21ರಂದು ಇದೇ ಪ್ರಕರಣದಲ್ಲಿ, ಆರೋಪಿಗಳಾದ ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ರೋಹಿತ್ ಮತ್ತು ಸಂತ್ರಿ ಮಲ್ಪೆಯ ಶಿಪ್‌ಯಾರ್ಡ್‌ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನಕ್ಕೆ ಹಂಚಿಕೊಂಡು, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಈ ಪ್ರಕರಣದ ತನಿಖೆ ಮಂದುವರೆಸಿದ ತನಿಖಾಧಿಕಾರಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ನೇತೃತ್ವದ ತಂಡ ಆರೋಪಿಗಳಿಗೆ ಮೊಬೈಲ್ ಸಿಮ್ ಕಾರ್ಡ್​​ ಒದಗಿಸಿದ ಆರೋಪದ ಮೇಲೆ ಹೀರೇಂದ್ರ ಕುಮಾರ್‌ನನ್ನು ಬಂಧಿಸಿದೆ. ಈತ ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಪಡೆದು ಆರೋಪಿಗಳಿಗೆ ನೀಡಿದ್ದ. ಈತನನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿರುವುದು ದೃಢ: ''ಈ ಪ್ರಕರಣದ ಆರಂಭದಲ್ಲಿ ಆರೋಪಿಗಳು ಶಿಪ್ ಮತ್ತು ಇತರೆ ಮಾಹಿತಿಗಳನ್ನು ಹಣಕ್ಕಾಗಿ ಶೇರ್ ಮಾಡಿರುವುದು ಪಾಕಿಸ್ತಾನಕ್ಕೆ ಇರಬಹುದೇ ಎಂಬ ಬಗ್ಗೆ ಸಂಶಯವಿತ್ತು. ಈ ಕುರಿತು ತೀವ್ರ ತನಿಖೆ ನಡೆಸಿದಾಗ ಆರೋಪಿಗಳು ಶೇರ್ ಮಾಡಿರುವ ಮಾಹಿತಿಗಳು ಪಾಕಿಸ್ತಾನಕ್ಕೆ ರವಾನೆ ಆಗಿರುವುದು ದೃಢಪಟ್ಟಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಸಾಕ್ಷ್ಯಗಳಿಂದ ಅದು ಸಾಬೀತಾಗಿದೆ'' ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

''ಇದೀಗ ಬಂಧಿತ ಆರೋಪಿ ಹೀರೇಂದ್ರ ಕುಮಾರ್, ಆರೋಪಿಗಳು ಪಾಕಿಸ್ತಾನದೊಂದಿಗೆ ಮಾಹಿತಿಗಳನ್ನು ಶೇರ್ ಮಾಡಲು ಬಳಸಿರುವ ಸಿಮ್ ಕಾರ್ಡ್​​ ನೀಡಿರುವುದಲ್ಲದೆ, ಈ ಸಿಮ್ ಮೂಲಕ ವಾಟ್ಸ್​ಆ್ಯಪ್ ಆ್ಯಕ್ಟೀವ್ ಮಾಡಲು ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಒಟಿಪಿ ಶೇರ್ ಮಾಡಿರುವುದು ಕೂಡ ಈತನೇ ಎಂಬುದು ಗೊತ್ತಾಗಿದೆ. ಅಲ್ಲದೆ, ಈತ ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದ್ದ ಎಂಬುದು ಸ್ಪಷ್ಟವಾಗಿದೆ'' ಎಸ್​ಪಿ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article