
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್ಳು ದೂರು ; ದೂರು ನೀಡಿದವನೇ ಜೈಲಿಗೆ, ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಪೊಲೀಸರ ವಿರುದ್ಧ ಎತ್ತಿಕಟ್ಟಿದ ಎಸ್ಡಿಪಿಐ ಮುಖಂಡನ ಮೇಲೆ ಕೇಸ್..!!

ಬಂಟ್ವಾಳ, ಸೆ.10 : ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ (48) ಎಂಬಾತ ತನ್ನ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆಂದು ಪೊಲೀಸ್ ದೂರು ನೀಡಿದ್ದು ತನಿಖೆ ನಡೆಸಿದ ವೇಳೆ ಸುಳ್ಳು ದೂರು ಎಂದು ತಿಳಿಯುತ್ತಲೇ ಆತನ ವಿರುದ್ಧವೇ ಪೊಲೀಸರು ಕೇಸು ದಾಖಲಿಸಿ ಜೈಲಿಗೆ ತಳ್ಳಿದ್ದಾರೆ.
ಜೂನ್ 13ರಂದು ಉಮ್ಮರ್ ಫಾರೂಕ್ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅ.ಕ್ರ 68/2025 ಕಲಂ:109, 324(4), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಬಳಿಕ ಯಾವುದೇ ಪುರಾವೆ ಸಿಗದ ಕಾರಣ ಸುಳ್ಳು ದೂರು ನೀಡಿದ್ದಾರೆಂದು ನ್ಯಾಯಾಲಯಕ್ಕೆ ಬಿ ಅಂತಿಮ ವರದಿ ಸಲ್ಲಿಸಿದ್ದಲ್ಲದೆ, ಸುಳ್ಳು ದೂರು ನೀಡಿದ ಉಮರ್ ಫಾರೂಕ್ ಮೇಲೆ ಠಾಣೆಯಲ್ಲಿ ಅ.ಕ್ರ 128/2025 ಕಲಂ:192, 353 (1) (B), 230 (1), 248(A) BNS ರಂತೆ ಪ್ರಕರಣ ದಾಖಲಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿ, ಉಮರ್ ಫಾರೂಕ್ ಮೇಲೆ ಯಾರೋ ದುಷ್ಕರ್ಮಿಗಳು ವಿನಾಕಾರಣ ಹಲ್ಲೆ ನಡೆಸಿದ್ದಾರೆಂದು ಹೇಳಿ ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ತಲಪಾಡಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಿದ್ದಾನೆ. ಈ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆನಂತರ, ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಎಂಬವರು ಇದೇ ವಿಚಾರವಾಗಿ ತನಿಖೆಯಲ್ಲಿರುವ ಪ್ರಕರಣದ ಬಗ್ಗೆ ಅಶ್ರಫ್ ತಲಪಾಡಿ ಎಂಬವರಿಗೆ ನೀಡಿದ ನೋಟೀಸಿನ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯದೇ ಅಪೂರ್ಣ ಮಾಹಿತಿಯೊಂದಿಗೆ ಸಂಬಂಧವಿಲ್ಲದ ಎರಡು ಘಟನೆಗಳನ್ನು ಹೋಲಿಕೆ ಮಾಡಿಕೊಂಡು ಧರ್ಮದ ಆಧಾರದಲ್ಲಿ ಸಂಬಂಧವನ್ನು ಕಲ್ಪಿಸಿ, ತನ್ನ ಫೇಸ್ ಬುಕ್ ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಸುದ್ದಿ ಹರಡಿದ್ದಾರೆ.
ಆಗಸ್ಟ್ 30 ರಂದು ರಿಯಾಜ್ ಕಡಂಬು ತನ್ನ ಫೇಸ್ಬುಕ್ ಖಾತೆಯಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿ, ಜನರನ್ನು ಅಪರಾಧ ಎಸಗುವಂತೆ ಪ್ರೇರೇಪಿಸಿ ಜಾತಿ, ಧರ್ಮದ ಆಧಾರದ ಮೇಲೆ ವೈರತ್ವ, ವೈಮನಸ್ಸು ಬೆಳೆಸಲು ಪ್ರಯತ್ನಿಸಿದ್ದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ. ಕ್ರ : 134/2025 ಕಲಂ:353(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದ.ಕ. ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.