
ಮಂಗಳೂರು: ಬೈಕಂಪಾಡಿಯಲ್ಲಿ ಸುಗಂಧ ದ್ರವ್ಯ ತಯಾರಿ ಘಟಕಕ್ಕೆ ಬೆಂಕಿ ; ಕೆಲವೇ ಕ್ಷಣಗಳಲ್ಲಿ ಧಗ ಧಗನೆ ಹೊತ್ತಿ ಉರಿದು ಭಸ್ಮಗೊಂಡ ಕಾರ್ಖಾನೆ.
Wednesday, September 10, 2025

ಮಂಗಳೂರು, ಸೆ.10 : ಸುರತ್ಕಲ್ ಬಳಿಯ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಆರೋಮಾಝೆನ್ ಹೆಸರಿನ ಸುಗಂಧದ್ರವ್ಯ ತಯಾರಕ ಫ್ಯಾಕ್ಟರಿ ಬೆಂಕಿಗಾಹುತಿಯಾಗಿದೆ.
ಬುಧವಾರ ಬೆಳಗ್ಗೆ 5 ಗಂಟೆ ವೇಳೆಗೆ ಬೆಂಕಿ ಹತ್ತಿಕೊಂಡಿದ್ದು ಧಗ ಧಗನೆ ಹೊತ್ತಿ ಉರಿದಿದೆ. ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಘಟಕವೇ ಧಗಧಗನೆ ಉರಿದು ಕರಕಲಾಗಿದೆ. ಆನಂತರ, ಸ್ಥಳಕ್ಕೆ ಎಂಸಿಎಫ್, ಎನ್‌ಎಂಪಿಎ ಹಾಗೂ ಕದ್ರಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಆದರೆ ಅಷ್ಟರಲ್ಲಿಯೇ ಸುಗಂಧ ದ್ರವ್ಯ ಘಟಕದಲ್ಲಿರುವ ಎಲ್ಲ ಸೊತ್ತುಗಳು ಸುಟ್ಟು ಹೋಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟವಾಗಿದ್ದು ಯಾವುದೇ ಪ್ರಾಣಾಪಾಯ, ಜೀವಕ್ಕೆ ಹಾನಿ ಉಂಟಾಗಿಲ್ಲ. ಬೆಳಗ್ಗಿನ ಜಾವ ಆಗಿದ್ದರಿಂದ ಘಟಕದಲ್ಲಿ ಕಾರ್ಮಿಕರು ಇರಲಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾರ್ಟ್ ಸರ್ಕಿಟ್ ಕಾರಣವೇ, ಯಾರಾದ್ರೂ ಬೆಂಕಿ ಹಚ್ಚಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.