
ನೇಪಾಳ: ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯಾರು ? ಭ್ರಷ್ಟಾಚಾರ ವಿರುದ್ಧ ದನಿಯೆತ್ತಿ ಕಾಠ್ಮಂಡು ಮೇಯರ್ ಆಗಿದ್ದ ಬಾಲೇಂದ್ರ ಶಾ ಪರ ಅಭಿಯಾನ, ಬೆಂಗಳೂರಿನಲ್ಲಿ ಎಂಟೆಕ್ ಗಳಿಸಿದ್ದ ಬಾಲೆನ್ !

ಕಾಠ್ಮಂಡು, ಸೆ.10 : ನೇಪಾಳದಲ್ಲಿ ತೀವ್ರ ಹಿಂಸಾಚಾರದ ಬಳಿಕ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಸರಕಾರ ಪತನಗೊಂಡಿದೆ. ಯುವಜನರು ಸರಕಾರದ ಭ್ರಷ್ಟಾಚಾರ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದು ಹಿಂಸಾಚಾರಕ್ಕೆ ತಿರುಗಿತ್ತು. ಇದರ ಬೆನ್ನಲ್ಲೇ ಯುವ ನಾಯಕನೊಬ್ಬನ ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿಬಂದಿದೆ.
ಕಾಠ್ಮಂಡು ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಮೇಯರ್ ಆಗಿರುವ ಬಾಲೇಂದ್ರ ಶಾ ಎನ್ನುವ 35 ವರ್ಷದ ಯುವಕನ ಹೆಸರನ್ನು ಜನರು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಾಡು ಬರೆದು ರಾಪರ್ ಆಗಿ ಜನರ ಗಮನ ಸೆಳೆದಿದ್ದ ಬಾಲೇಂದ್ರ ಶಾ 2022ರಲ್ಲಿ, ಮೊದಲ ಬಾರಿಗೆ ಪಕ್ಷೇತರನಾಗಿ ಚುನಾವಣೆಗೆ ನಿಂತು ಜಯ ಸಾಧಿಸಿದ್ದರು. ಆನಂತರ, ಕಾಠ್ಮಂಡು ನಗರದಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದರು.
ಇದೀಗ ನೇಪಾಳ ದೇಶದ ಸರಕಾರ ಪತನಗೊಂಡಿದ್ದರಿಂದ ಮುಂದಿನ ಪ್ರಧಾನಿ ಯಾರು ಎನ್ನುವ ಬಗ್ಗೆ ಚರ್ಚೆಯಾಗಿದೆ. ಹೆಚ್ಚಿನ ಜನರು ಬಾಲೆನ್ ಅವರನ್ನು ಸೂಚಿಸುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಅಸಮಾನತೆ ವಿರುದ್ಧ ಧ್ವನಿಯೆತ್ತಿ ಸಾರ್ವಜನಿಕ ಜೀವನಕ್ಕೆ ಬಂದಿರುವ ಶಾ ಅವರನ್ನು ಮುಂದಿನ ನಾಯಕನ ಸ್ಥಾನದಲ್ಲಿ ನೋಡುತ್ತಿದ್ದಾರೆ. ಬಾಲೆನ್ ಅವರಿಗೂ ಭಾರತಕ್ಕೆ ಹತ್ತಿರದ ನಂಟು ಇದೆ. ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಎಂಟೆಕ್ ಪೂರೈಸಿದ್ದರು.
ಶಿಕ್ಷಣದ ಬಳಿಕ ಹಿಪ್ ಹಾಪ್ ಮ್ಯೂಸಿಕ್ ಮೂಲಕ ಜನರ ಗಮನ ಸೆಳೆದಿದ್ದರು. ಇದರ ಮಧ್ಯೆಯೇ ಭ್ರಷ್ಟಾಚಾರ ವಿಷಯದಲ್ಲಿ ಹಾಡುಗಳನ್ನ ಹಾಡುತ್ತ ಜನರಿಗೆ ಹತ್ತಿರವಾಗಿದ್ದರು. 2023ರಲ್ಲಿ ಭಾರತದ ಚಿತ್ರಗಳನ್ನು ರಾಜಧಾನಿ ಕಾಠ್ಮಂಡುವಿನಲ್ಲಿ ಪ್ರದರ್ಶನ ಮಾಡದಂತೆ ನಿಷೇಧಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಿತ್ತು. ಆದಿಪುರುಷ್ ಚಿತ್ರದ ಕೆಲವು ಸಂಭಾಷಣೆಗೆ ಆಕ್ಷೇಪ ಕೇಳಿಬಂದಿದ್ದರಿಂದ ಮೇಯರ್ ಆಗಿದ್ದ ಬಾಲೆಂದ್ರ ಶಾ ತನ್ನ ರಾಜಧಾನಿ ನಗರದಲ್ಲಿ ಚಿತ್ರ ಪ್ರಸಾರ ಮಾಡಬಾರದೆಂದು ಆದೇಶ ಮಾಡಿದ್ದರು.
ಮಂಗಳವಾರ ಸಂಸತ್ತು, ಪ್ರಧಾನಿ, ಅಧ್ಯಕ್ಷರ ನಿವಾಸಗಳಿಗೆ ನುಗ್ಗಿ ಜನರು ಬೆಂಕಿ ಹಚ್ಚಿದ ಘಟನೆ ಹಿನ್ನೆಲೆಯಲ್ಲಿ ಬಾಲೇಂದ್ರ ಶಾ, ಹಿಂಸಾ ನಿರತರು ಶಾಂತಿ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದ್ದರು. ನಿಮ್ಮ ಹಿಂಸೆಯಿಂದಾಗಿ ದೇಶದ ಸಂಪತ್ತು ಹಾಳಾಗುತ್ತಿದೆ ಎಂದರೆ, ಅದು ನಮ್ಮದೇ ಸಂಪತ್ತು ನಾಶವಾಗ್ತಿದೆ ಎಂದೇ ಅರ್ಥ ಎಂದು ಹೇಳುವ ಮೂಲಕ ಸರಕಾರದ ಸೊತ್ತುಗಳನ್ನು ಹಾಳಮಾಡಬೇಡಿ, ಅದು ನಮ್ಮೆಲ್ಲರ ಸಂಪತ್ತು ಎಂದು ಬೀದಿಗಿಳಿದ ಯುವಜನರಲ್ಲಿ ಮನವಿ ಮಾಡಿದ್ದರು. ಬೀದಿಗಿಳಿದ ಜೆನ್ ಝೆಡ್ ಯುವಜನರು ಭ್ರಷ್ಟಾಚಾರಕ್ಕೆ ಉತ್ತರದಾಯಿತ್ವ ತೋರಿಸಿ ಎಂದು ರಾಜಕಾರಣಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.