ಸುಬ್ರಹ್ಮಣ್ಯ: ಒಂದೇ ಕುಟುಂಬದಲ್ಲಿ ಹದಿಮೂರು ಮಂದಿ ಶಿಕ್ಷಕರು; ರಾಜ್ಯದಲ್ಲೇ ಅಪರೂಪದ ಸಂಗತಿ...!!
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯ ಕೈಕಂಬ ಗ್ರಾಮದ ನಡುತೋಟ ಮನೆತನದವರು ತಮ್ಮನ್ನು ಶಿಕ್ಷಣ ವೃತ್ತಿಗೆ ಅರ್ಪಿಸಿಕೊಂಡಿದ್ದಾರೆ. ಈ ಕುಟುಂಬದ ಹದಿಮೂರು ಮಂದಿ, ತಮ್ಮ ಜೀವನವನ್ನೇ ಅಧ್ಯಾಪನ ಸೇವೆಗೆ ಮೀಸಲಿಟ್ಟು ಸಾವಿರಾರು ಮಕ್ಕಳ ಬಾಳಿಗೆ ಬೆಳಕಾಗುತ್ತಿದ್ದಾರೆ.
ಈ ಕುಟುಂಬದ ಹಿರಿಯರಾದ ನೀಲಪ್ಪ ಗೌಡ ನಡುತೋಟ ಅವರು ಶಿಕ್ಷಕ ದಾರಿಗೆ ಪ್ರೇರಣೆಯಾದವರು. ಇವರು ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹರಿಹರ ಪಲ್ಲತಡ್ಕ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಬಳಿಕ ಕಡಬದ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಸಹೋದರ-ಸಹೋದರಿಯರಿಗೆ ವಿದ್ಯಾಭ್ಯಾಸ ಕಲಿಸಿ ಶಿಕ್ಷಕರ ವೃತ್ತಿಯತ್ತ ಕೊಂಡೊಯ್ದಿರುವುದು ಇವರ ವಿಶೇಷತೆ.
ನೀಲಪ್ಪ ಗೌಡರ ಪತ್ನಿ ಶಾಂತಿ ಸುಬ್ರಹ್ಮಣ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ. ಸಹೋದರ ದಿವಾಕರ ಗೌಡ ಸುಂಕದಕಟ್ಟೆ ಶಾಲೆಯ ಮುಖ್ಯಶಿಕ್ಷಕರಾಗಿದ್ದು, ಸೇವೆಯಲ್ಲಿರುವಾಗಲೇ ವಿದ್ಯುದಾಘಾತದಿಂದ ಸಾವನ್ನಪ್ಪಿದ್ದರು. ಇವರ ಪತ್ನಿ ಸುಮತಿ ಬಿಳಿನೆಲೆ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ. ಇನ್ನೊಬ್ಬ ಸಹೋದರ ವಿಶ್ವನಾಥ ಗೌಡ ಸುಬ್ರಹ್ಮಣೇಶ್ವರ ಪಿಯು ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ವಿಭಾಗದ ಸ್ಥಾಪಕ ಉಪನ್ಯಾಸಕರಾಗಿದ್ದು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿ ನಿವೃತ್ತರಾದರು. ಪತ್ನಿ ಲೀಲಾ ಕುಮಾರಿ ಪಂಜದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿದ್ದಾರೆ.
ಮತ್ತೊಬ್ಬ ಸಹೋದರ ವಿಜಯ್ ಕುಮಾರ್ ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ. ಇವರ ಪತ್ನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕಿ. ಸಹೋದರಿ ಉಮಾ ಗುರುವಾಯನಕೆರೆ ಶಾಲೆಯ ಮುಖ್ಯಶಿಕ್ಷಕಿ. ಪತಿ ಧರ್ಣಪ್ಪ ಗೌಡ ಸೋಣಂದೂರು ಶಾಲೆಯ ನಿವೃತ್ತ ಮುಖ್ಯಶಿಕ್ಷಕ. ಇವರ ಸೊಸೆ ಶಿಲ್ಪಾ ಆದರ್ಶ್ ಅವರು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿ.
ನೀಲಪ್ಪ ಗೌಡರ ಪುತ್ರಿ ವಿದ್ಯಾಶ್ರೀ ಬೆಂಗಳೂರಿನ ಬೃಂದಾವನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿ. ಸೊಸೆ ರೇಷ್ಮಾ ದೇವರಗುಂಡ ಸುಳ್ಯ ನೆಹರು ಮೆಮೊರಿಯಲ್ ಪಿಯು ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ.
ಹೀಗೆ ಶಿಕ್ಷಣ ವೃತ್ತಿಯನ್ನು ಜೀವಿತದ ಧ್ಯೇಯವನ್ನಾಗಿಸಿಕೊಂಡಿರುವ ಈ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದ ಮಟ್ಟದಲ್ಲಿಯೂ ಒಂದೇ ಕುಟುಂಬದಲ್ಲಿ ಹದಿಮೂರು ಶಿಕ್ಷಕರು ಇರುವುದೊಂದು ಅಪರೂಪದ ಸಂಗತಿ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಡುತೋಟ ಕುಟುಂಬದ ಸದಸ್ಯ ಮತ್ತು ನಿವೃತ್ತ ರಾಷ್ಟ್ರಪ್ರಶಸ್ತಿ ವಿಜೇತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು, "ನಮ್ಮ ನಡುತೋಟ ಕುಟುಂಬದಲ್ಲಿ ನಮ್ಮ ತಾಯಿ ತಂದೆಯವರು ತುಂಬಾ ಬಡತನದಲ್ಲಿ ಬಂದವರು. ನಮ್ಮ ತಂದೆಗೆ ಯಾವುದೇ ವಿದ್ಯಾಭ್ಯಾಸ ಇರಲಿಲ್ಲ. ತಾಯಿಯವರು ಎರಡನೇ ತರಗತಿ ಓದಿದ್ದರು. ಆದರೆ ನಾವು ಐದು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮಾತ್ರ ಅವರು ಮರೆಯಲಿಲ್ಲ. ಈ ನಡುವೆ ನಮ್ಮ ದೊಡ್ಡ ಅಣ್ಣ ನೀಲಪ್ಪ ಗೌಡರವರು ಅಂದಿನ ಕಾಲದ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಮಂಗಳೂರಿಗೆ ಹೋಗಿ ಅಲ್ಲಿ ಟಿಸಿಹೆಚ್ ಪೂರ್ತಿಗೊಳಿಸಿದರು. ಆ ಸಮಯದಲ್ಲಿ ಅಂದಿನ ವಿದ್ಯಾಧಿಕಾರಿಗಳಾಗಿದ್ದ ಮುತ್ತಾಜೆ ಶಿವರಾಮಗೌಡರು 1972-73ರಲ್ಲಿ ನಮ್ಮ ದೊಡ್ಡಣ್ಣ ನೀಲಪ್ಪ ಗೌಡರಿಗೆ ಶಿಕ್ಷಕರಾಗಿ ಉದ್ಯೋಗ ನೀಡಿದರು. ಇದು ನಮ್ಮ ಕುಟುಂಬದ ದಿಕ್ಕನ್ನು ಬದಲಿಸಿತು. ದೊಡ್ಡಣ್ಣ ಉಳಿದ ಎಲ್ಲರಿಗೂ ಉತ್ತಮ ವಿದ್ಯಾಭ್ಯಾಸ ನೀಡಿದರು. ಈ ಹಿನ್ನೆಲೆಯಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರೂ ಶಿಕ್ಷಕರಾಗಿದ್ದೇವೆ. ನಮ್ಮ ಅದೃಷ್ಟವೆಂಬಂತೆ ಮನೆಗೆ ಬಂದ ಸೊಸೆಯಂದಿರು, ಅಕ್ಕನ ಮಗಳು, ತಂಗಿಯ ಸೊಸೆ ಸೇರಿದಂತೆ ಬಹುತೇಕರು ಪುಣ್ಯದ ಕೆಲಸವಾದ ಶಿಕ್ಷಣ ವೃತ್ತಿಯನ್ನೇ ಆಯ್ಕೆ ಮಾಡಿದ್ದಾರೆ. ಪ್ರಸ್ತುತ 13 ಮಂದಿ ಶಿಕ್ಷಕರನ್ನು ಪಡೆದ ನಮ್ಮ ನಡುತೋಟ ಕುಟುಂಬ ಸಂತೋಷದಿಂದ ಇದ್ದೇವೆ" ಎಂದು ಹೇಳುತ್ತಾರೆ.