ಚಿಕ್ಕಬಳ್ಳಾಪುರ :ಕಾಮರ್ಸ್ ಬ್ರಹ್ಮ ಇನ್ನಿಲ್ಲ: ಶಿಕ್ಷಕರ ದಿನಾಚರಣೆಯಂದೇ ಅತಿಥಿ ಉಪನ್ಯಾಸಕನಿಗೆ ಅಂತ್ಯ ಸಂಸ್ಕಾರ: ಊರಿಗೆ ಊರೇ ಕಂಬನಿ..!!

ಚಿಕ್ಕಬಳ್ಳಾಪುರ :ಕಾಮರ್ಸ್ ಬ್ರಹ್ಮ ಇನ್ನಿಲ್ಲ: ಶಿಕ್ಷಕರ ದಿನಾಚರಣೆಯಂದೇ ಅತಿಥಿ ಉಪನ್ಯಾಸಕನಿಗೆ ಅಂತ್ಯ ಸಂಸ್ಕಾರ: ಊರಿಗೆ ಊರೇ ಕಂಬನಿ..!!

ಚಿಕ್ಕಬಳ್ಳಾಪುರ: ಪ್ರೀತಿಯ ಉಪನ್ಯಾಸಕರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಶಿಕ್ಷಕರ ದಿನಾಚರಣೆಯಂದು ನೆರವೇರಿಸಲಾಗಿದೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಖ್ಯಾತ ವಾಣಿಜ್ಯಶಾಸ್ತ್ರದ ಅತಿಥಿ ಉಪನ್ಯಾಸಕ ಎನ್​​​​​. ರಮೇಶ್​​​​​​​​​​ ಅವರು ಸೆ. 4ರಂದು ಬ್ಲಡ್​​​​​​​​​​ ಕ್ಯಾನ್ಸರ್​​​ನಿಂದ ಮೃತಪಟ್ಟಿದ್ದರು. ಮೂವರು ಮಕ್ಕಳು, ಪತ್ನಿ, ವೃದ್ಧ ತಂದೆ ತಾಯಿಯನ್ನು ಅಗಲಿರುವ ರಮೇಶ್​​​ ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕಿನ ಕರ್ನಾಟಕ ಆಂಧ್ರಗಡಿಯ ಬಂದಾರ್ಲಹಳ್ಳಿ ಗ್ರಾಮದವರು.

ದೇಣಿಗೆ ಸಂಗ್ರಹ: ರಮೇಶ್​​ ಅಗಲಿಕೆಯಿಂದ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮನಗಂಡ ಸಹೋದ್ಯೋಗಿಗಳು, ಇತರೆ ಕಾಲೇಜುಗಳ ಅತಿಥಿ ಉಪನ್ಯಾಕರು, ಸ್ನೇಹಿತರು ಸೇರಿ ದೇಣಿಗೆ ಸಂಗ್ರಹಿಸಿ ಅವರ ಕಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಎನ್​​​​​. ರಮೇಶ್ ಅವರ ಬಗ್ಗೆ ಇಂತಿಷ್ಟು: ಎಂ.ಕಾಂ. ಪದವಿ ಹೊಂದಿರುವ ರಮೇಶ್ ಅವರು ಎನ್.ಇ.ಟಿ., ಸ್ಲೇಟ್ ಪರೀಕ್ಷೆಗಳನ್ನು ಪಾಸ್​ ಮಾಡಿಕೊಂಡು ಅಪಾರ ಜ್ಞಾನ ಹೊಂದಿದ್ದು ವಿದ್ಯಾರ್ಥಿಗಳ ಪಾಲಿಗೆ ಕಾಮರ್ಸ್ ಬ್ರಹ್ಮ ಅಂತಲೇ ಖ್ಯಾತಿ ಪಡೆದಿದ್ದರು. ಕಳೆದ ಒಂದು ತಿಂಗಳಿನ ಹಿಂದೆ ತೀವ್ರ ಕಾಯಿಲೆಯಿಂದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೊನೆಗೆ ಅವರಿಗೆ ರಕ್ತದ ಕ್ಯಾನ್ಸರ್​ ಇದೆ ಅಂತ ಗೊತ್ತಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಕೋಮಾಗೆ ಜಾರಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ಇದೇ ಸೆಪ್ಟಂಬರ್ 4 ರಂದು ಮೃತಪಟ್ಟಿದ್ದಾರೆ. ನಿನ್ನೆ ಶಿಕ್ಷಕರ ದಿನಾಚರಣೆಯಂದು ಅವರ ಪಾರ್ಥಿವ ಶರೀರವನ್ನು ಅವರ ತವರೂರು ಬಂದಾರ್ಲಹಳ್ಳಿ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಎಲ್ಲರೂ ಕಂಬನಿ ಮಿಡಿದರು.

ಈ ವೇಳೆ ಮಾತನಾಡಿದ ಖಾಸಗಿ ಕಾಲೇಜು ಪ್ರಾಂಶುಪಾಲ ಶಿವಣ್ಣ, "ಅತಿಥಿ ಉಪನ್ಯಾಸಕರಿಗೆ ಸಿಗಬೇಕಾದ ಸೌಲಭ್ಯಗಳು ಹೆಚ್ಚಿಸಬೇಕು. ಸರ್ಕಾರ ನೀಡುತ್ತಿರುವ 5 ಲಕ್ಷ ಇಡಗಂಟು ಹಣವನ್ನು 20 ರಿಂದ 25 ಲಕ್ಷಕ್ಕೆ ಏರಿಸಬೇಕು ಇಲ್ಲವಾದರೆ ಅವರ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ" ಎಂದರು.

ಈ ವೇಳೆ ಬಾಗೇಪಲ್ಲಿಯ ನ್ಯಾಷನಲ್​ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರುಗಳು, ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರಾದ ಮುನಿರಾಜು, ಸೇರಿದಂತೆ ಹಲವು ಸ್ನೇಹಿತರು ಬಾಗಿಯಾಗಿ, ದೇಣಿಗೆಯಿಂದ ಸಂಗ್ರಹವಾಗಿದ್ದ 35 ಸಾವಿರ ಹಣವನ್ನು ಮೃತ ರಮೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿ, ಸಹೃದಯಿಗಳು ರಮೇಶ್ ಅವರ ಕುಟುಂಬಕ್ಕೆ ನೆರವಾಗುವಂತೆ ಮನವಿ ಮಾಡಿದರು.

Ads on article

Advertise in articles 1

advertising articles 2

Advertise under the article