
ಅಮೆರಿಕ:ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಗುಂಡಿಟ್ಟು ಹತ್ಯೆ ; ವಿದ್ಯಾರ್ಥಿಗಳ ಎದುರಲ್ಲೇ ಆಗಂತುಕನಿಂದ ಗುಂಡಿನ ದಾಳಿ

ವಾಷಿಂಗ್ಟನ್, ಸೆ.11 : ಅಮೆರಿಕದ ಖ್ಯಾತ ಬಲಪಂಥೀಯ ಕಾರ್ಯಕರ್ತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿದ್ದ ಚಾರ್ಲಿ ಕಿರ್ಕ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಉಟಾವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾಷಣ ಮಾಡುತ್ತಿದ್ದಾಗಲೇ ಅವರ ಮೇಲೆ, ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ. ಆಗಂತುಕ ಹಾರಿಸಿದ ಗುಂಡು ಚಾರ್ಲಿ ಕಿರ್ಕ್ ಅವರ ಕುತ್ತಿಗೆಯನ್ನು ಸೀಳಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಸೇರಿದ್ದ ವಿದ್ಯಾರ್ಥಿಗಳು ಭಯದಿಂದ ಓಡಲು ತೊಡಗಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರಾಜಕೀಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
'ಚಾರ್ಲಿ ಕಿರ್ಕ್ ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡುಪಿಟ್ಟಿದ್ದರೋ ಮತ್ತು ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರೋ, ಆ ಮೌಲ್ಯಗಳಿಗೆ ಬದ್ಧರಾಗಬೇಕೆಂದು ನಾನು ಎಲ್ಲಾ ಅಮೆರಿಕನ್ನರಲ್ಲಿ ಮನವಿ ಮಾಡುತ್ತೇನೆ" ಎಂದು ಡೊನಾಲ್ಡ್ ಟ್ರಂಪ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಚಾರ್ಲಿ ಕಿರ್ಕ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದಲ್ಲದೆ, ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, "ಚಾರ್ಲಿ ಕಿರ್ಕ್ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆತ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿದ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ. ನೈಜ ಕೊಲೆಗಾರನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.