
ಮಂಗಳೂರು: ಇನ್ನೆಷ್ಟು ಜೀವ ಬಲಿಯಾಗಬೇಕು ಶಾಸಕ, ಸಂಸದರೇ? ರಸ್ತೆ ಅಪಘಾತಕ್ಕೆ ಹೆದ್ದಾರಿ ಅಧಿಕಾರಿಗಳೇ ಹೊಣೆ, ಕೆಲಸ ಮಾಡದವರು ಮನೆಗೆ ಹೋಗಲಿ ; ಪದ್ಮರಾಜ್ ಕಿಡಿ

ಮಂಗಳೂರು, ಸೆ.9 : ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಇನ್ನಿತರ ರಸ್ತೆಗಳ ದುರವಸ್ಥೆಯಿಂದ ಅನೇಕ ಜೀವಗಳು ಬಲಿಯಾಗುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮೂಕರಾಗಿರುವುದು ವಿಷಾದನೀಯ. ಮನೆಯಿಂದ ಕೆಲಸಕ್ಕಾಗಿ ಹೊರಟವರು ರಸ್ತೆಯ ಅವ್ಯವಸ್ಥೆಯಿಂದ ಶವವಾಗುತ್ತಿದ್ದಾರೆ. ಬಹಳಷ್ಟು ದಿನಗಳಿಂದ ಅಧಿಕಾರಿಗಳು ಹೊಂಡ ಬಿದ್ದ ರಸ್ತೆಯನ್ನು ನೋಡುತ್ತಿದ್ದಾರೆ ಹೊರತು ಮನುಷ್ಯನ ಜೀವ ರಕ್ಷಣೆಯ ಬಗ್ಗೆ ಕ್ರಮ ಕೈಗೆತ್ತಿಕೊಳ್ಳುವುದಿಲ್ಲ ಯಾಕೆ? ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ ಪ್ರಶ್ನಿಸಿದ್ದಾರೆ.
ಹೆದ್ದಾರಿ ಇನ್ನಿತರ ರಸ್ತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೇವಲ ಸಂಬಳ ಪಡೆಯುವುದಕ್ಕಾಗಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ..? ಹೆದ್ದಾರಿಯಲ್ಲಿ ಗುಂಡಿ ಬಿದ್ದರೆ ಅದನ್ನು ಮುಚ್ಚಬೇಕು, ಅದರಿಂದ ಜನರ ಜೀವಕ್ಕೆ ಹಾನಿಯಾಗುತ್ತದೆ ಎಂಬ ಕನಿಷ್ಠ ಕಾಳಜಿ ಅವರಿಗಿಲ್ಲವೇ ?
ರಸ್ತೆ ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿರುವ ಹಾಗೂ ಮರಣವನ್ನಪ್ಪಿದ ಅದೆಷ್ಟೋ ಜೀವವನ್ನು ಬಲಿ ತೆಗೆದುಕೊಂಡ ಘಟನೆಗಳಿಗೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧ ಪಟ್ಟ ಅಧಿಕಾರಿಗಳೇ ನೇರ ಹೊಣೆ. ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ನೇರವಾಗಿ ಮನೆಗೆ ಹೋಗಲಿ. ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಗಮನಹರಿಸಿ ಇನ್ನಾದರೂ ಮನುಷ್ಯನ ಜೀವಗಳು ಅಪಾಯಕ್ಕೆ ಸಿಲುಕದ ರೀತಿ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರಲ್ಲಿ ಆಗ್ರಹಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪದ್ಮರಾಜ್ ತಿಳಿಸಿದ್ದಾರೆ.
ಕೂಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಅಭಿನಂದನೀಯ. ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಇಲಾಖೆಯೇ ನೇರ ಜವಾಬ್ದಾರಿ ವಹಿಸಿ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂಬುದಾಗಿ ಹೇಳಿಕೆಯಲ್ಲಿ ಆಗ್ರಹ ಮಾಡಿದ್ದಾರೆ.