
ಮಂಗಳೂರು :ಕುಳೂರು ರಸ್ತೆ ಗುಂಡಿಗೆ ಮಹಿಳೆ ಬಲಿ ; ಘಟನೆ ಬಗ್ಗೆ ಜನಾಕ್ರೋಶ ಹಿನ್ನೆಲೆ, ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ ಹೆದ್ದಾರಿ ಪ್ರಾಧಿಕಾರ, ಅತಿ ವೇಗದಲ್ಲಿದ್ದ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು.

ಮಂಗಳೂರು, ಸೆ.9 : ಕುಳೂರಿನಲ್ಲಿ ರಸ್ತೆ ಅಪಘಾತಕ್ಕೆ ಮಹಿಳೆ ಬಲಿಯಾದ ಘಟನೆ ಸಂಬಂಧಿಸಿ ಸುರತ್ಕಲ್ ಸಂಚಾರಿ ಠಾಣೆ ಪೊಲೀಸರು ಹೆದ್ದಾರಿ ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಾಧವಿ (44) ಎಂಬವರು ಚಿತ್ರಾಪುರದ ತನ್ನ ಮನೆಯಿಂದ ಬೆಳಗ್ಗೆ 8.30ರ ವೇಳೆಗೆ ಸ್ಕೂಟರಿನಲ್ಲಿ ಬರುತ್ತಿದ್ದಾಗ ಕುಳೂರಿನ ರಾಯಲ್ ಓಕ್ ಮುಂಭಾಗದಲ್ಲಿ ಹೆದ್ದಾರಿ ಗುಂಡಿಗೆ ಬಿದ್ದು ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ, ಮೀನು ಸಾಗಾಟದ ಈಚರ್ ಲಾರಿ ಹಿಂದಿನಿಂದ ಅತಿ ವೇಗದಲ್ಲಿ ಬಂದಿದ್ದು ರಸ್ತೆಗೆ ಬಿದ್ದ ಮಹಿಳೆಯ ಮೇಲಿನಿಂದ ಸಾಗಿದೆ. ಮಹಿಳೆ ರಸ್ತೆಯಲ್ಲೇ ದಾರುಣವಾಗಿ ಸಾವು ಕಂಡಿದ್ದರು.
ಘಟನೆ ಹಿನ್ನೆಲೆಯಲ್ಲಿ ಹೆದ್ದಾರಿ ಉದ್ದಕ್ಕೂ ಗುಂಡಿ ಬಿದ್ದರೂ ನಿರ್ಲಕ್ಷ್ಯ ವಹಿಸಿರುವ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಮತ್ತು ಜನಪ್ರತಿನಿಧಿಗಳ ಬಗ್ಗೆಯೂ ಆಕ್ರೋಶ ಕೇಳಿಬಂದಿತ್ತು. ಅಪಘಾತ ಪಡಿಸಿದ ಲಾರಿ ಚಾಲಕ ಮೊಹಮ್ಮದ್ ಫಾರೂಕ್ ನನ್ನ ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯ ಮಾಡಲಾಗಿತ್ತು.
ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆಯಂತೆ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿ ಅಪಘಾತಕ್ಕೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿರುದ್ಧ ಹಾಗೂ ಲಾರಿ ಚಾಲಕ ಮೊಹಮ್ಮದ್ ಫಾರೂಕ್ ಮೇಲೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಕಲಂ 281, 106(1) ಬಿಎನ್ಎಸ್ ಮತ್ತು 198 (ಎ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.