ನವದೆಹಲಿ :ಪ್ರವಾಹ ಪೀಡಿತ ರಾಜ್ಯಗಳಿಗೆ ಪ್ರಧಾನಿ ಭೇಟಿ: ಪರಿಸ್ಥಿತಿ ಅವಲೋಕಿಸಲಿರುವ ಪ್ರಧಾನಿ ಮೋದಿ.
ನವದೆಹಲಿ: ಪ್ರವಾಹಕ್ಕೆ ಉತ್ತರ ಭಾರತ ತತ್ತರಿಸಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯು ಅನೇಕ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಗೆ ಕಾರಣವಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಲವು ಕಡೆ ಭಾರಿ ಮಳೆಯಿಂದಾಗಿ ಭೂ ಕುಸಿತ ಕಂಡಿದ್ದು, ರಾಜ್ಯಗಳು ಭಾರಿ ನಷ್ಟ ಅನುಭವಿಸಿವೆ.
ಈ ಪ್ರವಾಹ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ನಿಧಿಗಾಗಿ ಕೆಲವು ರಾಜ್ಯ ಸರ್ಕಾರಗಳ ಬೇಡಿಕೆಗಳನ್ನು ಇಟ್ಟಿದ್ದು, ಈ ನಡುವೆ ಪ್ರಧಾನಿ ಮೋದಿ ಈ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ ಎಂದು ಮೂಲಗಳು ಈಟಿವಿ ಭಾರತ್ಗೆ ಮಾಹಿತಿ ನೀಡಿವೆ.
ಇತ್ತೀಚಿಗೆ ಜಪಾನ್ ಮತ್ತು ಚೀನಾ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ರಾಜ್ಯ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಕ್ಕೆ ಅಗತ್ಯವಾದ ರಕ್ಷಣಾ ಮತ್ತು ಪರಿಹಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಸಹಾಯ ನೀಡಿದೆ.
ಪ್ರವಾಹಕ್ಕೆ ತುತ್ತಾಗಿರುವ ಪಂಜಾಬ್ನಲ್ಲಿ ಶುಕ್ರವಾರ ಸಾವಿನ ಸಂಖ್ಯೆ 43ಕ್ಕೆ ಏರಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಸಾಗಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿ ಏಮ್ಸ್ ದೆಹಲಿ ತಂಡ ವಿಶೇಷ ವೈದ್ಯಕೀಯ ತಂಡವನ್ನು ಕಳುಹಿಸಿದೆ.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ಅನುಸಾರ, ಅಮೃತಸರ (5), ಬರ್ನಾಲಾ (5), ಬಟಿಂಡಾ (4), ಫಾಜಿಲ್ಕಾ (1), ಫಿರೋಜ್‌ಪುರ (1), ಗುರುದಾಸ್‌ಪುರ (2), ಹೋಶಿಯಾರ್‌ಪುರ (7), ಮಾನ್ಸಾ (3), ಪಠಾಣ್‌ಕೋಟ್ (6), ಪಟಿಯಾಲ (1), ರೂಪನಗರ (1), ಸಂಗ್ರೂರ್ (1) ಮತ್ತು ಎಸ್‌ಎಎಸ್ ನಗರ (2) ಮತ್ತು ಲುಧಿಯಾನ (4). ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.
ದೆಹಲಿಯ ಏಮ್ಸ್ ವೈದ್ಯರು ಮತ್ತು ನರ್ಸ್ ಒಳಗೊಂಡ ತಂಡವನ್ನು ಪಂಜಾಬ್ ಸೇರಿದಂತೆ ಉತ್ತರ ಭಾರತದ ಪ್ರವಾಹ ಪೀಡಿತ ರಾಜ್ಯಗಳಿಗೆ ಕಳುಹಿಸುವ ಮೂಲಕ ಎಲ್ಲ ವೈದ್ಯಕೀಯ ಮತ್ತು ಮಾನವೀಯ ಬೆಂಬಲ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಹಕ್ಕೆ ತುತ್ತಾಗಿರುವ ಜಮ್ಮುವಿಗೆ ಸೆಪ್ಟೆಂಬರ್ 1ರಂದು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರು. ಇದೇ ವೇಳೆ, ಜಮ್ಮುವಿನಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ಭೇಟಿ ಮಾಡಿ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯನ್ನು ಪರೀಕ್ಷಿಸಿದರು. ಜಮ್ಮುವಿನ ಮಂಗು ಚಕ್ ಗ್ರಾಮದಲ್ಲಿ ಪ್ರವಾಹ ಪೀಡಿತ ಭೇಟಿಯಾಗಿ ಕಷ್ಟ ಆಲಿಸಿದರು.
ಬಿಕ್ರಮ್ ಚೌಕ್‌ನಲ್ಲಿರುವ ತಾವಿ ಸೇತುವೆ, ಶಿವ ದೇವಾಲಯ ಮತ್ತು ಜಮ್ಮುವಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದರು. ಭೇಟಿಯ ಬಳಿ ಉನ್ನತ ಮಟ್ಟದ ಸಭೆ ನಡೆಸಿ, ಈ ಕುರಿತು ಮಾಹಿತಿ ಮತ್ತು ಪರಿಹಾರ ಕ್ರಮ ತಿಳಿಸಿದರು.