ತಮಿಳುನಾಡು:ಇಥಿಯೋಪಿಯಾದಿಂದ ಮಾದಕ ವಸ್ತು ಕಳ್ಳಸಾಗಣೆ: ಇಬ್ಬರ ಬಂಧನ, ₹56 ಕೋಟಿ ಮೌಲ್ಯದ 5 ಕೆ.ಜಿ ಕೊಕೇನ್ ವಶ .!!
ಚೆನ್ನೈ: ಇಥಿಯೋಪಿಯಾದಿಂದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, 56 ಕೋಟಿ ರೂ. ಮೌಲ್ಯದ 5.618 ಕೆ.ಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬಾದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಇಥಿಯೋಪಿಯನ್ ಏರ್ಲೈನ್ಸ್ ವಿಮಾನದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮತ್ತು ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು ನಿಗಾ ವಹಿಸಿದ್ದರು.
ಉತ್ತರ ಭಾರತ ರಾಜ್ಯಗಳ ಇಬ್ಬರು ಆಫ್ರಿಕನ್ ದೇಶಕ್ಕೆ ಭೇಟಿ ನೀಡಿ ಚೆನ್ನೈಗೆ ಬಂದಿಳಿದಿದ್ದರು. ಅವರು ದೆಹಲಿ ಅಥವಾ ಮುಂಬೈಗೆ ಹೋಗದೆ ನೇರವಾಗಿ ಚೆನ್ನೈಗೆ ಬಂದಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ನಂತರ, ಇಬ್ಬರು ಪ್ರಯಾಣಿಕರನ್ನು ತಡೆದು ವಿಚಾರಣೆಗೊಳಪಡಿಸಲಾಯಿತು. ಈ ವೇಳೆ, ಇಬ್ಬರೂ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ನಂತರ, ಇಬ್ಬರನ್ನೂ ವಿಮಾನ ನಿಲ್ದಾಣದ ಕಸ್ಟಮ್ಸ್ ಕಚೇರಿಗೆ ಕರೆದ್ಯೊಯ್ದು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಅವರ ಬ್ಯಾಗ್ಗಳನ್ನು ಪರಿಶೀಲಿಸಲಾಯಿತು. ಅವುಗಳಲ್ಲಿ ಚಾಕೊಲೇಟ್ ಡಬ್ಬಿಗಳು ಪತ್ತೆಯಾಗಿವೆ.
ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ತೆರೆದು ನೋಡಿದಾಗ ಚಾಕೊಲೇಟ್ ಬದಲಿಗೆ ಕ್ಯಾಪ್ಸುಲ್‌ಗಳು ಕಂಡುಬಂದವು. ನಂತರ ಆ ಕ್ಯಾಪ್ಸುಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಿದಾಗ ಅದು ಕೊಕೇನ್ ಎಂದು ದೃಢಪಟ್ಟಿದೆ. ಬಳಿಕ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ಅವರಿಂದ 56 ಕೋಟಿ ರೂ. ಮೌಲ್ಯದ 5.618 ಗ್ರಾಂ ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಂಡರು.
ಬಂಧಿತರಿಬ್ಬರು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಆಫ್ರಿಕನ್ ದೇಶಗಳಿಂದ ಭಾರತಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದರು. ಅವರು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಅಂತಾರಾಷ್ಟ್ರೀಯ ಮಾದಕವಸ್ತು ಗ್ಯಾಂಗ್‌ನ ಸದಸ್ಯರು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮತ್ತಿಬ್ಬರ ಬಂಧನ: ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ನಡೆಸಿದ ವಿಚಾರಣೆಯ ಸಮಯದಲ್ಲಿ ಬಂಧಿತರು, ಇನ್ನಿಬ್ಬರು ಮುಂಬೈ ಮತ್ತು ದೆಹಲಿಗೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದಾರೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಿಗಾ ವಹಿಸಿದ್ದರು. ನಂತರ ಮುಂಬೈನಲ್ಲಿ ಓರ್ವ ಮತ್ತು ದೆಹಲಿಯಲ್ಲಿ ನೈಜೀರಿಯಾದ ಯುವಕನನ್ನು ಬಂಧಿಸಲಾಯಿತು. ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಗ್ಯಾಂಗ್‌ನ ಸದಸ್ಯರು ಯಾರು ಮತ್ತು ಇದರಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ.