ಆಂಧ್ರ ಪ್ರದೇಶ :ಒಂದಲ್ಲ, 5 ಸರ್ಕಾರಿ ನೌಕರಿ! ಈಗ ಒಂದು ಸರ್ಕಾರಿ ನೌಕರಿ ಪಡೆಯೋದು ಸ್ಪರ್ಧೆಯಿಂದಾಗಿ ಕಷ್ಟ.   ಇಲ್ಲೊಬ್ಬ ನೇಕಾರನ ಪುತ್ರನ ಕಠಿಣ ಪರಿಶ್ರಮದಿಂದ ಲಭಿಸಿದ ಐದು ಸರ್ಕಾರಿ ಹುದ್ದೆ...!!!

ಆಂಧ್ರ ಪ್ರದೇಶ :ಒಂದಲ್ಲ, 5 ಸರ್ಕಾರಿ ನೌಕರಿ! ಈಗ ಒಂದು ಸರ್ಕಾರಿ ನೌಕರಿ ಪಡೆಯೋದು ಸ್ಪರ್ಧೆಯಿಂದಾಗಿ ಕಷ್ಟ. ಇಲ್ಲೊಬ್ಬ ನೇಕಾರನ ಪುತ್ರನ ಕಠಿಣ ಪರಿಶ್ರಮದಿಂದ ಲಭಿಸಿದ ಐದು ಸರ್ಕಾರಿ ಹುದ್ದೆ...!!!

From Weaver's Son to Teacher: Srinivasulu Secures Five Jobs in DSC

ಆಂಧ್ರ ಪ್ರದೇಶ: ದೃಢನಿಶ್ಚಯ ಮತ್ತು ಪರಿಶ್ರಮಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಆಂಧ್ರ ಪ್ರದೇಶದ ಉರವಕೊಂಡ ಎಂಬಲ್ಲಿನ ಬಡ ಕುಟುಂಬದ ಯುವಕ ನಿದರ್ಶನ. ಈ ಯುವಕ ಐದು ಸರ್ಕಾರಿ ಉದ್ಯೋಗ ಪಡೆದು ಅನೇಕರು ಅಸಾಧ್ಯವೆಂದೇ ಪರಿಗಣಿಸುವ ಸಾಧನೆ ಮಾಡಿದ್ದಾರೆ.

ಕೈಮಗ್ಗ ನೇಕಾರರಾದ ಎರ್ರಿಸ್ವಾಮಿ ಮತ್ತು ರೊಡ್ಡ ವರಲಕ್ಷ್ಮಿ ಎಂಬ ದಂಪತಿಯ ಪುತ್ರ ಶ್ರೀನಿವಾಸುಲು ತಮ್ಮ ಕುಟುಂಬದ ಹೋರಾಟಗಳನ್ನು ನೋಡುತ್ತಾ ಬೆಳೆದವರು. ತಂದೆ ಪಾರ್ಶ್ವವಾಯು ರೋಗದಿಂದಾಗಿ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಕುಟುಂಬದ ನಿರ್ವಹಣೆಯನ್ನು ತಾಯಿಯೇ ನೋಡಿಕೊಳ್ಳಬೇಕಿತ್ತು. ಇದಕ್ಕೆ ಆಧಾರವಾಗಿದ್ದು ನೇಯ್ಗೆ. ಇಂತಹ ಕಡುಕಷ್ಟಗಳ ಹೊರತಾಗಿಯೂ ಪುತ್ರ ಶ್ರೀನಿವಾಸುಲು ಎಂದಿಗೂ ಶಿಕ್ಷಣವನ್ನು ನಿಲ್ಲಿಸಲಿಲ್ಲ.

ದೂರಶಿಕ್ಷಣದ ಮೂಲಕ ಪದವಿ ಮುಗಿಸಿದರು. ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದರು. ರಾಜ್ಯದ ಸರ್ಕಾರಿ ಪರೀಕ್ಷೆಗಳ ಮೇಲೆ ಕಣ್ಣಿಟ್ಟರು. 2018ರಲ್ಲಿ ಕೇವಲ ಒಂದು ಅಂಕದಿಂದ ಅರ್ಹತೆ ಪಡೆಯಲಾಗದೆ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಭರವಸೆ ಕಳೆದುಕೊಳ್ಳಲಿಲ್ಲ. ಸೋಲನ್ನು ಪ್ರೇರಣೆಯಾಗಿ ಪರಿವರ್ತಿಸಿಕೊಂಡು ಇನ್ನೂ ಹೆಚ್ಚಿನ ದೃಢನಿಶ್ಚಯದಿಂದ ಪರೀಕ್ಷೆಗೆ ಸಿದ್ಧರಾದರು.

ಇತ್ತೀಚೆಗೆ ಪ್ರಕಟವಾದ ಫಲಿತಾಂಶಗಳಲ್ಲಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರೀನಿವಾಸುಲು ಉತ್ತೀರ್ಣರಾಗುವುದಲ್ಲದೆ, ಶಾಲಾ ಸಹಾಯಕ (ಗಣಿತ), ಶಾಲಾ ಸಹಾಯಕ (ಭೌತಿಕ ವಿಜ್ಞಾನ), ಟಿಜಿಟಿ ಗಣಿತ (ಮಾದರಿ ಶಾಲೆ), ಟಿಜಿಟಿ ಭೌತ ವಿಜ್ಞಾನ ಮತ್ತು ಟಿಜಿಟಿ ವಿಜ್ಞಾನ ಎಂಬ 5 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಇವುಗಳಲ್ಲಿ ತಮ್ಮ ನೆಚ್ಚಿನ ವಿಷಯ ಗಣಿತದಲ್ಲಿ ಶಾಲಾ ಸಹಾಯಕ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸುಲು 2018 ಮತ್ತು 2019ರಲ್ಲಿ ರೈಲ್ವೆ ಗ್ರೂಪ್ ಡಿ ಪರೀಕ್ಷೆಗಳಲ್ಲೂ ಪಾಸ್ ಆಗಿದ್ದರು. ಆದರೆ ಆ ಅವಕಾಶಗಳನ್ನು ನಿರಾಕರಿಸಿದ್ದರು. ಏಕೆಂದರೆ ಅವರು ಶಿಕ್ಷಕ ವೃತ್ತಿಯ ಕನಸು ಕಾಣುತ್ತಿದ್ದರು. "ಬೋಧನೆ ನನಗೆ ಕೇವಲ ಒಂದು ಕೆಲಸವಲ್ಲ, ಅದು ನನ್ನ ಉತ್ಸಾಹ. ನಾನು ಯುವ ಮನಸ್ಸುಗಳನ್ನು ರೂಪಿಸಲು ಬಯಸುತ್ತಿದ್ದೇನೆ, ಆ ಕನಸಿಂದು ನನಸಾಗಿದೆ" ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಶ್ರೀನಿವಾಸುಲು ತಮ್ಮ ಯಶಸ್ಸಿಗೆ ರಾಧಾಕೃಷ್ಣ ಅವರ ಮಾರ್ಗದರ್ಶನವೇ ಕಾರಣ ಎನ್ನುತ್ತಾರೆ. ಅವರು ನೀಡಿದ ನಿರಂತರ ತರಬೇತಿ ಮತ್ತು ಪ್ರೋತ್ಸಾಹವೇ ತಮ್ಮ ಸಾಧನೆಗೆ ಕಾರಣವೆನ್ನುತ್ತಾರೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಶ್ರೀನಿವಾಸಲು ಸಾಧನೆಯಿಂದ ಸಂತೋಷಗೊಂಡಿದ್ದಾರೆ. ಇದು ಕೇವಲ ಅವರ ಗೆಲುವು ಮಾತ್ರವಲ್ಲ, ಸಾಧನೆಗೆ ಮುಂದಾಗುವ ಪ್ರತಿಯೊಬ್ಬ ಹೋರಾಟಗಾರ ವಿದ್ಯಾರ್ಥಿಗೂ ಸಿಕ್ಕ ಜಯ ಎನ್ನುತ್ತಾರೆ ಅವರು.

ಒಬ್ಬ ವ್ಯಕ್ತಿಗೆ ಧೈರ್ಯವಿದ್ದರೆ ಸೋಲು ಯಶಸ್ಸಿಗೆ ಅಡಿಪಾಯವಾಗಬಹುದು ಎಂಬುದು ಶ್ರೀನಿವಾಸಲು ಪ್ರಯಾಣ ನೆನಪಿಸುತ್ತದೆ. ನೇಕಾರರ ಮನೆಯಿಂದ ಶಿಕ್ಷಕ ಹುದ್ದೆಯವರೆಗಿನ ಶ್ರೀನಿವಾಸುಲು ಅವರ ಸಾಧನೆ ಅನೇಕರು ತಮ್ಮ ಕನಸುಗಳನ್ನು ಸಮರ್ಪಣಾಭಾವದಿಂದ ಬೆನ್ನಟ್ಟಲು ಸ್ಫೂರ್ತಿ ನೀಡಬಲ್ಲದು.

Ads on article

Advertise in articles 1

advertising articles 2

Advertise under the article