
ಛತ್ತೀಸ್ಗಡ :30 ವರ್ಷಗಳಿಂದ ಕಾಗೆಗಳ ಹಸಿವು ನೀಗಿಸುತ್ತಿರುವ ಪಕ್ಷಿಪ್ರೇಮಿ...!!"

ಛತ್ತೀಸ್ಗಢ: ನಮ್ಮ ಪೂರ್ವಜರು ಪಕ್ಷಿಗಳಿಗೆ ಆಹಾರ ನೀಡುತ್ತಿದ್ದ ಕುರಿತು ಹಿಂದೂ ಪುರಾಣಗಳಲ್ಲಿ ಉಲ್ಲೇಖಗಳಿವೆ. ಆದರೆ, ಇಂದಿನ ಒತ್ತಡದ ಜೀವನದಲ್ಲಿ ಪಕ್ಷಿಗಳ ಚಿಲಿಪಿಲಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುವವರು ಕಡಿಮೆ. ಛತ್ತೀಸ್‌ಗಢದ ಧಮತರಿ ಜಿಲ್ಲೆಯ ಪ್ರಕಾಶ್ ಎಂಬವರು ಕಳೆದ 30 ವರ್ಷಗಳಿಂದಲೂ ತಮ್ಮ ಮನೆ ಮೇಲ್ಛಾವಣಿಯಲ್ಲಿ ಕಾಗೆಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ.
ಪ್ರಕಾಶ್ ಅವರು ಕಾಗೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪಿತೃ ಪಕ್ಷದ ಸಂದರ್ಭದಲ್ಲಿ ಸಾವಿರಾರು ಕಾಗೆಗಳು ಇವರ ಮನೆಗೆ ಬರುತ್ತಿವೆ. ಧಮತರಿಯಲ್ಲಿ ಕಾಗೆಗಳು ಕೂಗುವುದಕ್ಕೆ ಪ್ರಕಾಶ್ ಅವರೇ ಕಾರಣ ಎನ್ನುತ್ತಾರೆ ಇಲ್ಲಿನ ಜನರು.
ಪೌರಾಣಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದ ವೇಳೆ ಜನರು ತಮ್ಮ ಪೂರ್ವಜರನ್ನು ಸಂತೃಪ್ತಿಪಡಿಸಲು ಹಸು, ನಾಯಿ ಮತ್ತು ಕಾಗೆಗಳಿಗೆ ಆಹಾರ ನೀಡುತ್ತಾರೆ. ಈ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ. ಧಮತರಿಯ ಪ್ರಕಾಶ್ ಅವರು ಪಿತೃ ಪಕ್ಷದ ಸಮಯದಲ್ಲಿ ಮಾತ್ರವಲ್ಲ, ಪ್ರತಿದಿನವೂ ಕಾಗೆಗಳಿಗೆ ಆಹಾರ ನೀಡುತ್ತಾರೆ.
ಧಮತರಿ ನಗರದ ಗಣೇಶ್ ಚೌಕ್‌ನಲ್ಲಿ ವಾಸಿಸುವ ಇವರಿಗೆ ಗೋಲ್ಬಜಾರ್‌ನಲ್ಲಿ ಒಂದು ಸಣ್ಣ ಬಟ್ಟೆ ಅಂಗಡಿ ಇದೆ. ಇವರ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದಾರೆ. ಕಾಗೆಗಳನ್ನೂ ಕುಟುಂಬ ಸದಸ್ಯರೆಂದೇ ಪರಿಗಣಿಸುತ್ತಾರೆ. ಪ್ರಕಾಶ್ ತಮ್ಮ ಅಂಗಡಿಯಿಂದ ಬರುವ ಆದಾಯದಿಂದ ಕುಟುಂಬವನ್ನು ಪೋಷಿಸುತ್ತಾರೆ. ಈ ಆದಾಯದ ಒಂದು ಭಾಗವನ್ನು ತಮ್ಮ ವಿಶೇಷ ಸ್ನೇಹಿತರಾದ ಕಾಗೆಗಳಿಗೂ ಖರ್ಚು ಮಾಡುತ್ತಿದ್ದಾರೆ.
ಪ್ರಕಾಶ್ ಮಗುವಾಗಿದ್ದಾಗ ಹೆತ್ತವರು ಕೂಡಾ ಇದನ್ನೇ ಮಾಡುತ್ತಿದ್ದರಂತೆ. ಈ ಸ್ಥಳ ಕಾಗೆಗಳಿಗೆ ಎರಡನೇ ಮನೆಯಂತಾಗಿದೆ. ತಮ್ಮ ಹೆತ್ತವರು ನಿಧನರಾದ ನಂತರ ಆ ಜವಾಬ್ದಾರಿಯನ್ನು ಪ್ರಕಾಶ್ ಮುಂದುವರೆಸುತ್ತಿದ್ದಾರೆ. ಕಾಗೆಗಳಿಗೆ ಒಂದು ದಿನವೂ ಆಹಾರ ನೀಡುವುದನ್ನು ನಿಲ್ಲಿಸಿಲ್ಲ. ಇಂದಿಗೂ, ಪ್ರತಿದಿನ ಬೆಳಿಗ್ಗೆ ಮನೆ ಟೆರೇಸ್‌ಗೆ ಹೋಗಿ ಕಾಗೆಗಳಿಗೆ ಆಹಾರ ನೀಡುತ್ತಾರೆ.
ಕರೆದ ತಕ್ಷಣ ಬರುವ ಕಾಗೆಗಳು: ಪ್ರಕಾಶ್ ಮಾತನಾಡಿದ್ದು, "ಸುಮಾರು 30 ವರ್ಷಗಳಿಂದ ಕಾಗೆಗಳಿಗೆ ಆಹಾರ ನೀಡುತ್ತಿದ್ದೇನೆ. ಮನೆಯಲ್ಲಿ ನಾನು ಬಿಸ್ಕತ್ತು, ಅನ್ನ ಸೇರಿ ಏನೇ ತಿಂದರೂ ಅದನ್ನು ಕಾಗೆಗಳಿಗೂ ತಿನ್ನಿಸುತ್ತೇನೆ. ಕಾಗೆಗಳು ನನ್ನ ಬಳಿಗೆ ಬರುವುದು ನನ್ನ ಅದೃಷ್ಟ. ಇದನ್ನು ನನಗೆ ಕಲಿಸಿದ್ದು ನನ್ನ ಹೆತ್ತವರು. ಅವರು ಆಶೀರ್ವಾದ ನನಗಿದೆ. ನನ್ನ ತಂದೆ, ದಿವಂಗತ ಕಲ್ಯಾಣ್ ದಾಸ್ ಅಡ್ವಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದರು. ಅವರ ನಂತರ ನಾನು ಮುಂದುವರೆಸಿ ಆನಂದಿಸುತ್ತಿದ್ದೇನೆ. ಅವು ನನಗೆ ಆಶೀರ್ವಾದ ನೀಡುತ್ತವೆ" ಎಂದರು.
ನಗರೀಕರಣದಿಂದ ಪಕ್ಷಿಗಳ ಸಂಖ್ಯೆ ಇಳಿಕೆ: ನಗರೀಕರಣ ಪಕ್ಷಿಗಳ ಸಂಖ್ಯೆ ಇಳಿಕೆಗೆ ಕಾರಣವಾಗುತ್ತಿದೆ. ಜನರು ಇದರ ಬಗ್ಗೆ ಗಮನ ಹರಿಸಬೇಕು. ಕಾಗೆಗಳು ಎಲ್ಲೆಡೆ ಇವೆ. ಅವುಗಳ ಸಂತತಿ ಅಳಿದುಹೋಗಿಲ್ಲ. ಅವು ಎಚ್ಚರಿಕೆಯ ಪಕ್ಷಿಗಳು. ಜನರು ಸಮಯ ಸಿಕ್ಕಾಗಲೆಲ್ಲ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಪ್ರಕಾಶ್ ಅವರನ್ನು ಬಲ್ಲ ಹರೀಶ್ ಚೌಬೆ ಎಂಬವರು ಮಾತನಾಡಿ, "ಪ್ರಕಾಶ್ ಅವರು ಹಲವು ವರ್ಷಗಳಿಂದ ಕಾಗೆಗಳ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕಾಗೆಗಳನ್ನು ಮಾತ್ರವಲ್ಲದೆ ಎಲ್ಲ ಪ್ರಾಣಿ ಮತ್ತು ಪಕ್ಷಿಗಳನ್ನು ಬೆಂಬಲಿಸಲು ಶ್ರಮಿಸಬೇಕು. ಪ್ರಕಾಶ್ ಅಡ್ವಾಣಿ ತಮ್ಮ ಗಳಿಕೆಯ ಒಂದು ಭಾಗವನ್ನು ಕಾಗೆಗಳಿಗೆ ಖರ್ಚು ಮಾಡುತ್ತಿದ್ದಾರೆ. ಇದು ನಮಗೆ ಸ್ಫೂರ್ತಿ ನೀಡಿದೆ" ಎಂದರು.
ಜಿಲ್ಲಾಧಿಕಾರಿಯಿಂದ ಶ್ಲಾಘನೆ: ಧಮತರಿಯ ಜಿಲ್ಲಾಧಿಕಾರಿ ಅಬಿನಾಶ್ ಮಿಶ್ರಾ ಕೂಡ ಪ್ರಕಾಶ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. "ಪ್ರಕಾಶ್ ಪಕ್ಷಿಗಳ ಬಗ್ಗೆ ವಿಶೇಷ ಗಮನ ಹರಿಸುತ್ತಿರುವುದು ಹೆಮ್ಮೆಯ ವಿಷಯ" ಎಂದು ತಿಳಿಸಿದ್ದಾರೆ.
"ಪ್ರಾಣಿ, ಪಕ್ಷಿಗಳು ಪ್ರಕೃತಿಯ ಒಂದು ಭಾಗ. ಮಾನವರಲ್ಲೂ ಅವು ವಿಶೇಷ ಸ್ಥಾನ ಹೊಂದಿವೆ. ಅವುಗಳಿಲ್ಲದೆ ಸುಂದರ ಪ್ರಕೃತಿಯನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು" ಎಂದು ಡಿಸಿ ಕಿವಿಮಾತು ಹೇಳಿದ್ದಾರೆ.