
ಉಡುಪಿ: ಜುವೆಲ್ಲರಿ ವರ್ಕ್‌ಶಾಪ್ ಕಳ್ಳತನ; ಐವರು ಅಂತಾರಾಜ್ಯ ಕಳ್ಳರ ಬಂಧನ; ₹87 ಲಕ್ಷ ಮೌಲ್ಯದ ಸೊತ್ತು ವಶ..!!

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಕಿರೋಸ್ ತಾಲೂಕಿನ ಶುಭಂ ತಾನಾಜಿ ಸಾಥೆ (25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ (19), ಸಾಗರ ದತ್ತಾತ್ರೇಯ ಕಂಡಗಾಲೆ (32) ಹಾಗೂ ಬಾಗವ ರೋಹಿತ್ ಶ್ರೀಮಂತ್ (25) ಬಂಧಿತ ಆರೋಪಿಗಳು. ಬಂಧಿತರಿಂದ 74,88,000 ರೂ. ಮೌಲ್ಯದ 748.8 ಗ್ರಾಂ ಚಿನ್ನ, 3,60,000 ಮೌಲ್ಯದ ಬೆಳ್ಳಿ ಹಾಗೂ 5,00,000 ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 87,48,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಮಟೆ ಮೂಲದ, ಪ್ರಸ್ತುತ ಉಡುಪಿ ನಗರದ ಅಪಾರ್ಟ್‌ಮೆಂಟ್ ನಿವಾಸಿ ವೈಭವ್ ಮೋಹನ ಘಾಟಗೆ ಎಂಬವರಿಗೆ ಸೇರಿದ ಜುವೆಲ್ಲರಿ ವರ್ಕ್‌ಶಾಪ್‌ನಲ್ಲಿ ಸೆ.8ರಂದು ಕಳ್ಳತನ ನಡೆದಿತ್ತು. ಮಾರುತಿ ವೀಥಿಕಾ ಬಳಿಯ ಉಪೇಂದ್ರ ಎಂಬ ಕಟ್ಟಡದ ನೆಲಮಹಡಿಯಲ್ಲಿರುವ ವೈಭವ ಗೋಲ್ಡ್ ಆ್ಯಂಡ್ ಸಿಲ್ವರ್ ಮೆಲ್ವಿಂಗ್ ಮತ್ತು ರಿಫೈನರಿ ಅಂಗಡಿಗೆ ರಾತ್ರಿ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು, ರಿಫೈನರಿ ಮಷಿನ್‌ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿದ್ದ ಕಳ್ಳರು: ಕಳ್ಳರು ಕೃತ್ಯಕ್ಕೂ ಮುನ್ನ ಕಳ್ಳರು ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದರು. ಓರ್ವ ಕಳ್ಳ ಸಿಸಿ ಕ್ಯಾಮರಾಗೆ ಸ್ಪ್ರೇ ಎರಚುತ್ತಿರುವ ದೃಶ್ಯ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ತಂಡ, ಆರೋಪಿಗಳನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಕಿರೋಸ್ ತಾಲೂಕಿನ ನಿಮ್ಹಾಂವ್ ಎಂಬಲ್ಲಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಎಎಸ್ಐ ಭರತೇಶ ಕಂಕಣವಾಡಿ, ಕಾಪು ಎಎಸ್ಐ ತೇಜಸ್ವಿ ಟಿ.ಐ., ಕೊಲ್ಲೂರು ಎಎಸ್ಐ ವಿನಯಕುಮಾರ್ ಕೆ., ಎಎಸ್ಐ ಹರೀಶ್, ಸಿಬ್ಬಂದಿಯಾದ ಜೀವನ್ ಕುಮಾರ್, ಪ್ರಸನ್ನ ಕುಮಾರ್, ಸಂತೋಷ್ ಶೆಟ್ಟಿ, ಸಂತೋಷ್ ರಾಥೋಡ್, ಶಿವಕುಮಾರ್, ಹೇಮಂತ್ ಕುಮಾರ್, ಸುನೀಲ್ ರಾಥೋಡ್, ಮಣಿಪಾಲ್ ಠಾಣೆಯ ರವಿರಾಜ್, ಕೊಲ್ಲೂರು ಠಾಣೆಯ ನಾಗೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯದ ಅಕ್ಲುಜ್ ಪೊಲೀಸ್ ಠಾಣಾ ಸಿಬ್ಬಂದಿಯಾದ ಎಸ್.ಆರ್.ಮಾದುಬಾವಿ, ವಿ.ಬಿ.ಘಾಟಗೆ, ವಿ.ಎ. ಸಾಟೆ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.