
ಮಂಗಳೂರು:ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್- ಬಿಸಿ ರೋಡ್ ಚತುಷ್ಪಥ 28 ಕೋಟಿ ವೆಚ್ಚದಲ್ಲಿ ಕಾಯಕಲ್ಪ, ಆರು ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು, ಹೆದ್ದಾರಿ ಅಧಿಕಾರಿಗಳ ಸಭೆಯಲ್ಲಿ ಸಂಸದ ಚೌಟ ಸೂಚನೆ

ಮಂಗಳೂರು, ಸೆ.12 : ಗುಂಡಿ ಬಿದ್ದ ಹೆದ್ದಾರಿಗಳಿಗೆ ತುರ್ತಾಗಿ ಕಾಯಕಲ್ಪ ನೀಡಲು ಸಂಸದ ಬ್ರಿಜೇಶ್ ಚೌಟ ಮುಂದಾಗಿದ್ದು, ತುರ್ತು ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಸುರತ್ಕಲ್- ಬಿಸಿ ರೋಡ್ ನಡುವಿನ 33 ಕಿಮೀ ಉದ್ದದ ಹೆದ್ದಾರಿಯನ್ನು ಸಂಪೂರ್ಣ ಮರು ಡಾಮರೀಕರಣ, ಸರ್ವಿಸ್ ರಸ್ತೆ, ಆಯಕಟ್ಟಿನ ಜಂಕ್ಷನ್ ಇರುವಲ್ಲಿ ತಿರುವುಗಳನ್ನು ಸರಿಪಡಿಸುವ ಕಾರ್ಯಕ್ಕೆ 28 ಕೋಟಿ ಬಿಡುಗಡೆಯಾಗಿದ್ದು ಟೆಂಡರ್ ಕೂಡ ಆಗಿದೆ. ಮಳೆಯ ಕಾರಣಕ್ಕೆ ಕಾಮಗಾರಿ ವಿಳಂಬ ಆಗಿತ್ತು. ತಕ್ಷಣವೇ ಕೆಲಸ ಕೈಗೆತ್ತಿಕೊಂಡು ಆರು ತಿಂಗಳಲ್ಲಿ ಮುಗಿಸುವಂತೆ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಹೆದ್ದಾರಿ ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಟ್ಟಿನಲ್ಲಿ ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಜೊತೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜೊತೆಗೆ ಸಂಸದ ಚೌಟ ಸಭೆ ನಡೆಸಿದ್ದು, ಹೆದ್ದಾರಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ, ಮಹಾನಗರ ಪಾಲಿಕೆ ಎಂಜಿನಿಯರ್ ನರೇಶ್ ಶೆಣೈ, ಮಂಗಳೂರು ನಗರ ಸಂಚಾರ ವಿಭಾಗದ ಎಸಿಪಿ ಶ್ರೀಮತಿ ನಜ್ಮಾ ಫಾರೂಕಿ, ಗುತ್ತಿಗೆದಾರ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಈಗಾಗಲೇ ಸುರತ್ಕಲ್ – ಬಿಸಿ ರೋಡ್ ಹೆದ್ದಾರಿಯನ್ನು ಎನ್ಎಂಪಿಟಿಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಪಡೆದುಕೊಳ್ಳಲು ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಬೇಡಿಕೆ ಇಟ್ಟಿದ್ದು, ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರ ಜೊತೆಗೆ ಈ ಹೆದ್ದಾರಿ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾಗಿರುವುದು ಮತ್ತು ಏರ್ಪೋರ್ಟ್, ಬಂದರು ಸಂಪರ್ಕದ ರಸ್ತೆಯಾಗಿದ್ದರಿಂದ ಇದಕ್ಕೊಂದು ಬೈಪಾಸ್ ರಸ್ತೆ ಮಾಡುವುದು ಹಾಗೂ ಒಟ್ಟು ಈ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಇಲಾಖೆ ಸಚಿವರಿಗೆ ಮನವಿ ನೀಡಿದ್ದೇನೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಲು ಅನುಮತಿ ದೊರೆತಿದೆ. ಸದ್ಯಕ್ಕೆ ತುರ್ತಾಗಿ ದುರಸ್ತಿ ಕಾರ್ಯ, ಆಬಳಿಕ ಈ ಹೆದ್ದಾರಿಯ ಉದ್ದಕ್ಕೂ ಅಗತ್ಯ ಇರುವಲ್ಲಿ ಸರ್ವಿಸ್ ರಸ್ತೆ ಮತ್ತು ಹೆಚ್ಚು ಗುಂಡಿ ಬೀಳುವಲ್ಲಿ ಕಾಂಕ್ರೀಟ್ ಹಾಕಿ, ಪೊಲೀಸರು ಮತ್ತು ಹೆದ್ದಾರಿ ಪ್ರಾಧಿಕಾರ ಸಮನ್ವಯದಿಂದ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಚೌಟ ಸೂಚಿಸಿದರು.
ನಂತೂರು ವೃತ್ತದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲು ಯಾಕೆ ಸಾಧ್ಯವಾಗಲ್ಲ ಎಂದು ಟ್ರಾಫಿಕ್ ಎಸಿಪಿ ಅವರಲ್ಲಿ ಸಂಸದ ಚೌಟ ಪ್ರಶ್ನೆ ಮಾಡಿದರು. ನಂತೂರು ವೃತ್ತ ಏರು ತಗ್ಗು ಇರುವುದರಿಂದ ಸಿಗ್ನಲ್ ವ್ಯವಸ್ಥೆ ಪೂರಕವಾಗಿಲ್ಲ. ವಾಹನಗಳು ಸರಾಗ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು. ವೇದವ್ಯಾಸ್ ಪ್ರತಿಕ್ರಿಯಿಸಿ, ಕೆಲವು ನಗರಗಳಲ್ಲಿ ಐದು ರಸ್ತೆ ಒಂದೇ ಕಡೆ ಸೇರುವುದಿದ್ದರೂ ಸಿಗ್ನಲ್ ವ್ಯವಸ್ಥೆ ಇರುತ್ತದೆ. ಇದನ್ನು ಯಾಕೆ ಆ ರೀತಿ ಮಾಡಲಾಗದು ಎಂದು ಪ್ರಶ್ನಿಸಿದರು.
ಹೆದ್ದಾರಿ ಬದಿಯಲ್ಲಿ ಗೂಡಂಗಡಿ, ಮೀನು ಮಾರಾಟಕ್ಕೆ ಅವಕಾಶ ನೀಡಬಾರದು, ಇದರಿಂದ ಟ್ರಾಫಿಕ್ ತೊಂದರೆಯಾಗುತ್ತದೆ ಎಂದು ಸಂಸದರು ಪೊಲೀಸರಿಗೆ ಸೂಚನೆ ನೀಡಿದರು. ಇದಕ್ಕೆ ಶಾಸಕ ಕಾಮತ್, ಹೆದ್ದಾರಿ ಬದಿಯಲ್ಲಿ ಯಾವುದೇ ರೀತಿ ಅತಿಕ್ರಮ ಇದ್ದರೂ ಪಾಲಿಕೆಯಲ್ಲಿ ಮಾಡಿದ ರೀತಿ ಟೈಗರ್ ಕಾರ್ಯಾಚರಣೆ ನಡೆಸಿ, ಪೊಲೀಸರನ್ನು ಜೊತೆಗೆ ಸೇರಿಸಿಕೊಂಡು ಈ ಕೆಲಸ ಮಾಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.