
ಅಮೇರಿಕಾ :ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ್ಲಿ ಕನ್ನಡಿಗನ ಬರ್ಬರ ಕಗ್ಗೊಲೆ, ಸಹೋದ್ಯೋಗಿಯಿಂದಲೇ ಶಿರಚ್ಛೇದ !

ವಾಷಿಂಗ್ಟನ್: ಅಮೆರಿಕದ ವಸತಿಗೃಹವೊಂದರಲ್ಲಿ ವಾಶಿಂಗ್ ಮೆಷಿನ್ ಬಳಕೆಯ ವಿಷಯದಲ್ಲಿ ಉಂಟಾದ ವಾಗ್ವಾದವು ಕನ್ನಡಿಗನೊಬ್ಬನ ಕಗ್ಗೊಲೆಗೆ ಕಾರಣವಾಗಿದೆ. ಅಮೆರಿಕದ ಡಲ್ಲಾಸ್ ಎಂಬಲ್ಲಿಯ ಅತಿಥಿಗೃಹದಲ್ಲಿ ಮ್ಯಾನೇಜರ್ ಆಗಿದ್ದ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ ಎಂಬವರನ್ನು ಯೋರ್ಡಾನಿಸ್ ಕೋಬೋಸ್ ಮಾರ್ಟಿನೆಸ್ ಎಂಬಾತ ಮಚ್ಚಿನಿಂದ ಕೊಚ್ಚಿ ಶಿರಚ್ಛೇದ ಮಾಡಿ ಕೊಲೆಗೈದಿದ್ದಾನೆ.
ಅತಿಥಿ ಗೃಹದಲ್ಲಿ ಮ್ಯಾನೇಜರ್ ಆಗಿದ್ದ ಚಂದ್ರ ನಾಗಮಲ್ಲಯ್ಯ ತನ್ನ ಸಹೋದ್ಯೋಗಿಯೊಂದಿಗೆ ವಾಶಿಂಗ್ ಮೆಷಿನ್ ಬಳಕೆಯ ಬಗ್ಗೆ ವಾಗ್ವಾದ ನಡೆಸಿದ್ದು ಇದರಿಂದ ಕೆರಳಿದ ಮಾರ್ಟಿನೆಸ್ ಆತನ ಶಿರಚ್ಛೇದ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬುಧವಾರ ಘಟನೆ ಸಂಭವಿಸಿದ್ದು ಕರ್ನಾಟಕದ ಚಂದ್ರ ನಾಗಮಲ್ಲಯ್ಯ(50), 37 ವರ್ಷದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಸ್‌ಗೆ ಕೆಟ್ಟು ಹೋಗಿರುವ ವಾಷಿಂಗ್ ಮೆಷಿನ್ ಅನ್ನು ಬಳಸದಂತೆ ಹೇಳಿದ್ದು ಇದು ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಕೆರಳಿದ ಆರೋಪಿ, ಮಚ್ಚು ತೆಗೆದುಕೊಂಡು ಚಂದ್ರ ನಾಗಮಲ್ಲಯ್ಯರನ್ನು ಅಟ್ಟಾಡಿಸಿಕೊಂಡು ಹಲವು ಬಾರಿ ಇರಿದಿದ್ದ. ಈ ವೇಳೆ ನಾಗಮಲ್ಲಯ್ಯ ಪಾರ್ಕಿಂಗ್ ಸ್ಥಳದಿಂದ ಕಚೇರಿಯ ಕಡೆಗೆ ಓಡಲು ಪ್ರಯತ್ನಿಸಿದರೂ ಆರೋಪಿ ಆತನನ್ನು ಬೆನ್ನಟ್ಟಿ ಶಿರಚ್ಛೇದ ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ.
ನಾಗಮಲ್ಲಯ್ಯ ಅವರ ಪತ್ನಿ ಮತ್ತು 18 ವರ್ಷದ ಪುತ್ರ ಕೋಬೋಸ್- ಮಾರ್ಟಿನೆಸ್‌ನನ್ನು ತಡೆಯಲು ಪ್ರಯತ್ನಿಸಿದರೂ, ಆತ ಕೋಪದ ಭರದಲ್ಲಿ ಅವರನ್ನು ತಳ್ಳಿ ನಾಗಮಲ್ಲಯ್ಯನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಮಾರ್ಟಿನೆಸ್ ಮಚ್ಚಿನಿಂದ ತಾನು ಕತ್ತರಿಸಿದ ಚಂದ್ರ ನಾಗಮಲ್ಲಯ್ಯನ ತಲೆಯನ್ನು ಎತ್ತಿಕೊಂಡು ಕಸದ ಬುಟ್ಟಿಯತ್ತ ಸಾಗುತ್ತಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ. ರಕ್ತದಲ್ಲಿ ಮುಳುಗಿದ ಮಚ್ಚನ್ನು ಹೊತ್ತುಕೊಂಡು ಕಸದ ಬುಟ್ಟಿಗೆ ಬಿಸಾಡಿ ಅಲ್ಲಿಂದ ಹೊರಡುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರ ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿದ್ದು, ಕೆಲಸದ ಸ್ಥಳದಲ್ಲಿ ಅವರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಹೇಳಿದೆ. ನಾವು ಚಂದ್ರ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ಈ ವಿಷಯದ ಬಗ್ಗೆ ನಾವು ನಿಗಾ ಇಡುತ್ತಿದ್ದೇವೆ ಎಂದು ರಾಯಭಾರ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ.