
ಆಂಧ್ರ ಪ್ರದೇಶ :ಸಾಯೋ ಮರಗಳಿಗೆ ಮರುಜೀವ ಕೊಡುವ ಸಸ್ಯ ವೈದ್ಯೆ: ಇವರ ಮನೆ ಹಿತ್ತಲಲ್ಲಿ ಸಾವಿರಕ್ಕೂ ಅಧಿಕ ಗಿಡ ಮರಗಳು!!

ಕಳೆದ 30 ವರ್ಷಗಳಿಂದ ಲಲಿತಾ ಅವರು, ಅತ್ಯಂತ ತಾಳ್ಮೆಯಿಂದ ಸಸ್ಯಗಳ ಮೇಲೆ ತಮಗಿರುವ ಆಳವಾದ ಪ್ರೀತಿಯಿಂದ, ತಮ್ಮ ಕೌಶಲ್ಯವನ್ನು ಬಳಸಿ ದೊಡ್ಡ ಮತ್ತು ಸಣ್ಣ ಸಸ್ಯಗಳಿಗೆ ಮರುಜೀವ ಕೊಡುವ ಅದ್ಭುತ ಕೆಲಸ ಮಾಡುತ್ತಾ ಬಂದಿದ್ದಾರೆ. ಸಸ್ಯಶಾಸ್ತ್ರದಲ್ಲಿ ಯಾವುದೇ ಔಪಚಾರಿಕ ಅಧ್ಯಯನ ಮಾಡದೇ ಇದ್ದರೂ, ಹಸಿರಿನ ಮೇಲಿನ ಅವರ ಪ್ರೀತಿ ಅವರನ್ನು ಸ್ಥಳೀಯ ದಂತಕಥೆಯನ್ನಾಗಿ ಮಾಡಿದೆ.
ಸಸ್ಯಗಳ ಮೇಲಿದೆ ಅಗಾಧ ಪ್ರೀತಿ: ನನ್ನ ತಂದೆ ಎಲ್ಲಿಗೆ ಹೋದರೂ, ವಾಪಸ್ ಬರುವಾಗ ಗಿಡಗಳನ್ನು ತರುತ್ತಿದ್ದರು. ಹಾಗೆ ತಂದ ಗಿಡಗಳನ್ನು ನೋಡಿಕೊಳ್ಳುವುದು ನಮ್ಮ ಕೆಲಸವಾಗಿತ್ತು. ಕೆಲಸಕ್ಕಿಂತ ಹೆಚ್ಚಾಗಿ ಅದು ನಮ್ಮ ಜವಾಬ್ದಾರಿಯಾಗಿತ್ತು. ಹಾಗಾಗಿ ನನಗೆ ಸಣ್ಣ ವಯಸ್ಸಿನಿಂದಲೂ ಗಿಡಗಳ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ ಎನ್ನುತ್ತಾರೆ ಲಲಿತಾ.
ಮೂರು ದಶಕಗಳ ಹಿಂದೆ ತಂದೆ ಜೊತೆ ಸೇರಿಕೊಂಡು ಬೋನ್ಸಾಯ್ ತರಬೇತಿ ಪಡೆಯಲು ಪ್ರಾರಂಭಿಸಿದರು. ಭಾರತದ ಎಲ್ಲಿಯೇ ಬೋನ್ಸಾಯ್ ತರಬೇತಿ ನೀಡುತ್ತಿದ್ದರೆ, ಅವುಗಳಲ್ಲಿ ತಂದೆ ಜೊತೆಗೆ ಭಾಗವಹಿಸುತ್ತಿದ್ದರು. ಅವುಗಳಿಗೆ ಸ್ವತಃ ಅವರೇ ಹಣವನ್ನೂ ಪಾವತಿಸುತ್ತಿದ್ದರು ಎನ್ನುವುದು ಅವರಿಗೆ ಅದನ್ನು ಕಲಿಯುವುದರ ಮೇಲಿದ್ದ ಆಸಕ್ತಿಗೆ ಸಾಕ್ಷಿ. ಕೆಲವೇ ವರ್ಷಗಳಲ್ಲಿ ಉತ್ತರ ಆಂಧ್ರದಲ್ಲಿ ಸಾವಿರಾರು ಜನರಿಗೆ ಬೋನ್ಸಾಯ್ ಕೃಷಿಯ ಬಗ್ಗೆ ತರಬೇತಿ ನೀಡಲು ಸಾಕಷ್ಟು ಪರಿಣತಿ ಪಡೆದರು.
ಗಿಡಗಳಿಗಾಗಿ ಇವರು ತಮ್ಮನ್ನು ಸಮರ್ಪಿಸಿಕೊಂಡಿರುವುದಕ್ಕೆ ಇವರ ಹಿತ್ತಲೇ ಸಾಕ್ಷಿ. 200 ಗಜಗಳಷ್ಟು ವಿಸ್ತಾರವಾದ ಜಾಗದಲ್ಲಿ, 30 ವರ್ಷ ಹಳೆಯ ಆಲದ ಮರ, ಅಶೋಕ ಮರ, ಮಧುಕಾಮಿನಿ ಸೇರಿದಂತೆ ಸುಮಾರು ಸಾವಿರ ಮರಗಳು ಹಾಗೂ ಹಣ್ಣಿನ ಸಸ್ಯಗಳಿವೆ. ಅವರ ಮನೆಯ ಛಾವಣಿ ಮೇಲಯೂ ಅನೇಕ ಸಸ್ಯಗಳನ್ನು ಬೆಳೆಸಿದ್ದಾರೆ. ಅವರ ಮನೆಗೆ ಭೇಟಿ ನೀಡದರೆ, ಅವರ ಜಾಣ್ಮೆ ಹಾಗೂ ಗಿಡಗಳ ಬಗೆಗಿನ ಅವರ ಕಾಳಜಿ ಎದ್ದು ಕಾಣುತ್ತದೆ.
ತರಬೇತಿ, ಜಾಗೃತಿ, ಹಾಗೂ ಪ್ರಯತ್ನ: ಬೋನ್ಸಾಯ್ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಲಲಿತಾ ಅವರು ವಿಶಾಖ ಬೋನ್ಸಾಯ್ ಸೊಸೈಟಿಯನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ಆಂಧ್ರಪ್ರದೇಶದ ಉತ್ತರ ಭಾಗದಲ್ಲಿ ಬೋನ್ಸಾಯ್ ಕೃಷಿಯ ಬಗ್ಗೆ ಪ್ರದರ್ಶನಗಳನ್ನು ಆಯೋಜಿಸುತ್ತಾರೆ. ಜೊತೆಗೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಉತ್ಸವಗಳಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮಗಳಿಗಾಗಿ ಇವರು ಬೆಳೆದ ಸಸ್ಯಗಳನ್ನು ಸಾಲವಾಗಿ ನೀಡುತ್ತಾರೆ. ಇತ್ತೀಚೆಗೆ ಮೈಸೂರಿನ ದತ್ತ ಪೀಠ ಹೋಮಕ್ಕಾಗಿ 300 ಬೋನ್ಸಾಯ್ ಸಸ್ಯಗಳನ್ನು ನೀಡುವಂತೆ ಕೇಳಿದ್ದರು. ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದರು. ಹಾಗಾಗಿ ನಾನು ಅವರಿಗೆ ಗಿಡಗಳನ್ನು ನೀಡಿದೆ ಎಂದು ಲಲಿತಾ ತಿಳಿಸಿದರು.