
ಮಂಗಳೂರು:ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ; 10 ದಿನ ಹಬ್ಬದ ಸಂಭ್ರಮ,ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಎಂದು ವೈಭವದಿಂದ ನಡೆದ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ.!!

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ಶಾರದಾ ಮಾತೆ, ಮಹಾಗಣಪತಿ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಮಂಗಳೂರು ರಾಮಕೃಷ್ಣ ಮಿಶನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಚಾಲನೆ ನೀಡಿದರು.
ಭವ್ಯ ಕಲಾಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಸಹಿತ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿ, ಸಿದ್ಧಿಧಾತ್ರಿಯರ ಮೂರ್ತಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಅಪಾರ ಭಕ್ತರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ತದಿಗೆ ಉಪರಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ದಸರಾ ಪೂಜೆ ನಡೆಯಲಿದೆ. ಭವ್ಯ ಮೂರ್ತಿಗಳಿಗೆ ಅಕ್ಟೋಬರ್ 2ರಂದು ಸಂಜೆ ವಿಸರ್ಜನಾ ಪೂಜೆಯ ನಂತರ, ನಗರದಾದ್ಯಂತ ಮೆರವಣಿಗೆ ನಡೆಯಲಿದೆ. ಮರುದಿನ ಬೆಳಗ್ಗೆ ಮೂರ್ತಿಗಳನ್ನು ದೇವಸ್ಥಾನದ ಕಲ್ಯಾಣಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ಮಂಗಳೂರು ದಸರಾದ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆದಿದೆ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರತಿಷ್ಠಾಪನೆಗೆ ಜನಸಾಗರ ಹರಿದುಬಂದಿದೆ. ಹತ್ತು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸಾಂಸ್ಕೃತಿಕ ಕಲಾ ವೈಭವ: ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ. 40 ತಂಡಗಳ ಸುಮಾರು 1,500ಕ್ಕೂ ಅಧಿಕ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕಲಾಸಕ್ತ ಮನಸುಗಳಿಗಾಗಿ ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ, ಯಕ್ಷಗಾನ, ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್‌ಬಂಧಿ, ಸಪ್ತ ವೀಣಾವಾದನ, ಜಾದೂ ಪ್ರದರ್ಶನ, ನವರಸಗಳ ಸಮ್ಮಿಲನ ಈ ಬಾರಿಯ ವಿಶೇಷತೆ.
ಸಾಹಿತ್ಯ ವೈಭವ: ಸೆ.23ರಂದು ಸಂಜೆ 4ರಿಂದ 6ರವರೆಗೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಬಿ.ಮುರಾರಿ ತಂತ್ರಿ (ಸಂಸ್ಕೃತ), ಮನೋಜ್ ಕುಮಾರ್ (ಕನ್ನಡ), ವಿನೋದ ಮೂಡುಗದೆ(ಅರೆಭಾಷೆ), ಹಂಝಾ ಮಲಾರ್ (ಬ್ಯಾರಿ), ಜೊನ್ಸಿ ಪಿಂಟೋ (ಕೊಂಕಣಿ), ವೆಂಕಟೇಶ್ ನಾಯಕ್ (ಕೊಂಕಣಿ), ಡಾ. ಸುರೇಶ್ ನೆಗಳಗುಳಿ (ಹವ್ಯಕ), ಡಾ. ಅಣ್ಣಯ್ಯ ಕುಲಾಲ್ (ಕುಂದಗನ್ನಡ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಶ್ರೀಮತಿ ಕವಿತಾ ಅಡ್ಡೂರು (ಶಿವಳ್ಳಿ ತುಳು), ಶ್ರೀಮತಿ ಗೀತಾ ಲಕ್ಷ್ಮೀಶ ಶೆಟ್ಟಿ(ತುಳು) ಕವನ ವಾಚಿಸಲಿದ್ದಾರೆ.
ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ತುಳು ಭಾಷಾ ಕವಿಗೋಷ್ಠಿಯಲ್ಲಿ ರೂಪಕಲಾ ಆಳ್ವ, ಗಣೇಶ್ ಪ್ರಸಾದ್ ಪಾಂಡೇಲ್, ಅಶೋಕ ಎನ್. ಕಡೇಶಿವಾಲಯ, ಸದಾನಂದ ನಾರಾವಿ, ದೊಂಬಯ್ಯ ಇಡ್ಕಿದು, ಶಶಿಕಲಾ ಭಾಸ್ಕರ್ ಬಾಕ್ರಬೈಲ್, ಪ್ರಮೀಳಾ ದೀಪಕ್ ಪೆರ್ಮುದೆ ಕವನ ವಾಚಿಸಲಿದ್ದಾರೆ. ಅಂಚೆ ಮುಖೇನ ನಡೆಸಲಾದ ಕವನ ಸ್ಪರ್ಧೆಗೆ ಅತ್ಯುತ್ತಮ ಬೆಂಬಲ ದೊರೆತಿತ್ತು. ಆಯ್ದ ಕವನಗಳನ್ನು ಒಳಗೊಂಡ ಕವನ ಸಂಕಲನ ಮುದ್ರಣಗೊಂಡು ಈ ಸಂದರ್ಭ ಬಿಡುಗಡೆಯಾಗಲಿದೆ.
ಮುದ್ದು ಶಾರದೆ ಸ್ಪರ್ಧೆ: ಸೆ.24ರಂದು ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆ ಬೆಳಗ್ಗೆ 9 ರಿಂದ ಸಂಜೆಯವರೆಗೆ ನಡೆಯಲಿದೆ.
ದೇಹರ್ದಾಡ್ಯ ಸ್ಪರ್ಧೆ : 26 ರಂದು ಯುವಕರಿಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯ ಮಟ್ಟದ ದೇಹರ್ದಾಡ್ಯ ಸ್ಪರ್ಧೆ ಆಯೋಜಿಸಲಾಗಿದೆ.
ದಸರಾ ಮ್ಯಾರಾಥನ್ : ದಸರಾ ಅಂಗವಾಗಿ 3ನೇ ವರ್ಷದ ದಸರಾ ಮ್ಯಾರಥಾನ್ 28ರಂದು ಬೆಳಗ್ಗೆ 4 ಗಂಟೆಯಿಂದ ನಡೆಯಲಿದೆ. 21ಕೆ ರನ್, 10ಕೆ ರನ್, 5ಕೆ ರನ್, 2ಕೆ ಸ್ಯಾರಿ ರನ್ ಆಯೋಜಿಸಲಾಗಿದೆ. ಒಟ್ಟು 1,00,000 ರೂ. ಬಹುಮಾನ ಘೋಷಿಸಲಾಗಿದೆ.
ಮಕ್ಕಳ ದಸರಾ : ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೆ. 28ರಂದು ಮಕ್ಕಳ ದಸರಾ ಪರಿಕಲ್ಪನೆಯಡಿ ಮಕ್ಕಳಿಗೋಸ್ಕರ ಕಿನ್ನಿಪಿಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆಯನ್ನು ಆಕರ್ಷಕ ಬಹುಮಾನದೊಂದಿಗೆ ಆಯೋಜಿಸಲಾಗಿದೆ.
ಅಸಾಮಾನ್ಯ ಸ್ತ್ರೀ ಪುರಸ್ಕಾರ ಪ್ರದಾನ : ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯುವ ದಸರಾದಲ್ಲಿ ನವಶಕ್ತಿಗಳ ಆಶೀರ್ವಾದದೊಂದಿಗೆ ಪ್ರತಿದಿನ ಒಬ್ಬರಂತೆ ಒಟ್ಟು 9 ದಿನ 9 ಸಾಧಕಿಯರಿಗೆ ಸಂಜೆ 7:30ಕ್ಕೆ ಅಸಾಮಾನ್ಯ ಸ್ತ್ರೀ ಪುರಸ್ಕಾರ -2025ನ್ನು ನೀಡಿ ಗೌರವಿಸಲಾಗುತ್ತದೆ.
ವನಜಾ ಪೂಜಾರಿ (ಸಾಮಾಜಿಕ-ಮೋಕ್ಷಧಾಮ), ವೆಂಕಮ್ಮ ಕುಡಂಬೆಟ್ಟು (ಪ್ರಸೂತಿ ತಜ್ಞೆ), ಶಾಲೆಟ್ (ಸಾಮಾಜಿಕ- ಮೂಕಪ್ರಾಣಿಗಳ ಆರೈಕೆ), ಸುಶೀಲಾ ಪಾಣಾರ (ಪಾರ್ದನ), ಯೋಗಾಕ್ಷಿ ಗಣೇಶ್ (ತೆಂಕುತಿಟ್ಟು ಮಹಿಳಾ ಯಕ್ಷಗಾನ ಮೇಳದ ಸಂಚಾಲಕಿ), ಜಾನಕಿ ಕೊಡ್ಯಡ್ಕ (ನಾಟಿ ವೈದ್ಯೆ), ತಬಸ್ಸುಮ್ (ಸಾಮಾಜಿಕ-ಅನಾಥ ಹೆಚ್.ಐ.ವಿ ಪೀಡಿತ ಮಕ್ಕಳ ಆರೈಕೆ), ಬಿ. ಎಂ. ರೋಹಿಣಿ (ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರ), ರೋಹಿಣಿ ಜಗರಾಮ್ (ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗ) ಇವರ ಅಪ್ರತಿಮ ಸಾಧನೆ ಗುರುತಿಸಿ ಅಸಾಮಾನ್ಯ ಸ್ತ್ರೀ ಪುರಸ್ಕಾರ ಪ್ರದಾನ ನೆರವೇರಲಿದೆ.
ಧಾರ್ಮಿಕ ಅನುಷ್ಠಾನಗಳು : ನವರಾತ್ರಿ ಪ್ರಯುಕ್ತ ಪ್ರತಿದಿನವೂ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಧಾರ್ಮಿಕ ಅನುಷ್ಠಾನ ಭಜನಾ ಕಾರ್ಯಕ್ರಮಗಳು ನೆರವೇರಲಿದೆ. ಸೆ. 22ರಂದು ಮಹಾನವಮಿ, 23ರಂದು ದುರ್ಗಾ ಹೋಮ, 24ಕ್ಕೆ ಪಂಚದುರ್ಗಾ ಹೋಮ, 25ರಂದು ಆರ್ಯ ದುರ್ಗಾ ಹೋಮ, 26ರಂದು ಅಂಬಿಕಾದುರ್ಗಾ ಹೋಮ, ಸೆ.27 ಭಗವತಿ ದುರ್ಗಾ ಹೋಮ, 28ರಂದು ಸಾಮೂಹಿಕ ಚಂಡಿಕಾ ಹೋಮ, 29 ಮಹಿಷಮರ್ದಿನಿ ದುರ್ಗಾ ಹೋಮ, 30ರಂದು ಚಂಡಿಕಾ ಹೋಮ, ಹಗಲೋತ್ಸವ, ಅ1ರಂದು ಸರಸ್ವತಿ ಹೋಮ, 11ಕ್ಕೆ ಶತ ಸೀಯಾಳಭಿಷೇಕ, ಶಿವಪೂಜೆ (ಮಹಾನವಮಿ), ಅ2ರಂದು ವಾಗೀಶ್ವರಿ ದುರ್ಗಾ, ಶಿವಪೂಜೆ, 3ರಂದು ಪ್ರಾತಃಕಾಲ ಗಂಟೆ 4ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ, ಬಳಿಕ ಶ್ರೀ ಶಾರದಾ ವಿಸರ್ಜನೆ, ಅವಭೃತಸ್ನಾನ, ರಾತ್ರಿ 8ರಿಂದ ಗುರುಪೂಜೆ ನೆರವೇರಲಿದೆ.
2 ರಂದು ಭವ್ಯ ಶೋಭಾಯಾತ್ರೆ : ಅಕ್ಟೋಬರ್ 2ರಂದು ಶ್ರೀ ಬಿ. ಜನಾರ್ದನ ಪೂಜಾರಿಯವರ ನೇತೃತ್ವವದಲ್ಲಿ ಸಂಜೆ 4ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ಕಂಬ್ಳರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್‌ಬಾಗ್, ಬಲ್ಲಾಳ್‌ಭಾಗ್, ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್, ಕೆ. ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸ್ನಿಂದ ಶ್ರೀಕ್ಷೇತ್ರಕ್ಕೆ ಬರಲಿದೆ.