
ಸುಳ್ಯ :ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಮಹಮ್ಮದ್ ಇಕ್ಬಾಲ್ ಬೆಳ್ಳಾರೆ ಗ್ರಾಪಂ ಸದಸ್ಯತ್ವ ರದ್ದು

ಸುಳ್ಯ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ, ಪ್ರಸ್ತುತ ಜೈಲಿನಲ್ಲಿರುವ ಮಹಮ್ಮದ್ ಇಕ್ಬಾಲ್ ಎಂಬಾತ ಪ್ರತಿನಿಧಿಸುತ್ತಿದ್ದ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದು ಮಾಡಲಾಗಿದೆ.
ಬೆಳ್ಳಾರೆ ಗ್ರಾ.ಪಂ.ನ 1ನೇ ವಾರ್ಡ್ ಚುನಾಯಿತ ಸದಸ್ಯನಾಗಿದ್ದ ಕೆ. ಮಹಮ್ಮದ್ ಇಕ್ಬಾಲ್ 2024-25ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆಯನ್ನು ನಿಗದಿತ ಅವಧಿಯೊಳಗೆ ದಾಖಲಿಸದೇ ಇರುವ ಕಾರಣ, ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಬಿ)(4)ರಡಿ ಗ್ರಾ.ಪಂ. ಸದಸ್ಯತ್ವದಿಂದ ತೆಗೆದುಹಾಕಿ ಹಾಗೂ ಆ ಸ್ಥಾನವು ಖಾಲಿಯಾಗಿದೆ ಎಂದು ಘೋಷಿಸಲಾಗಿದೆ.
ಈ ಬಗ್ಗೆ ಚುನಾವಣ ಆಯೋಗವು ಬೆಳ್ಳಾರೆ ಗ್ರಾ.ಪಂ.ಗೆ ಪತ್ರದ ಮೂಲಕ ಮಾಹಿತಿ ನೀಡಿದೆ. ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯನಾಗಿದ್ದು ಪ್ರಕರಣ ಸಂಬಂಧಿಸಿ ಎರಡು ವರ್ಷಗಳಿಂದ ಜೈಲಿನಲ್ಲಿರುವುದರಿಂದ ಇಕ್ಬಾಲ್ ಸ್ವಯಂ ಆಗಿ ತನ್ನ ಆಸ್ತಿ ಘೋಷಣೆ ಮಾಡಲು ಸಾಧ್ಯವಾಗದಿದ್ದರಿಂದ ಚುನಾವಣಾ ಆಯೋಗದ ನಿಯಮದಂತೆ ಪಂಚಾಯತ್ ಸದಸ್ಯತ್ವದಿಂದ ಅನರ್ಹ ಮಾಡಲಾಗಿದೆ.