
ಕಾರ್ಕಳ :ಹಣಕ್ಕಾಗಿ ಹೊಟೇಲ್ ಸಿಬಂದಿ ಕಿರಿಕ್ ; ಪುಣೆಯಲ್ಲಿ ಕಾರ್ಕಳದ ಹೊಟೇಲ್ ಉದ್ಯಮಿಯನ್ನು ಕಡಿದು ಕೊಲೆಗೈದ ಕಾರ್ಮಿಕ !

ಕಾರ್ಕಳ, ಆ.27 : ಕಾರ್ಕಳ ಮೂಲದ ಹೋಟೆಲ್ ಉದ್ಯಮಿಯನ್ನು ಅಲ್ಲಿನ ಸಿಬ್ಬಂದಿಯೊಬ್ಬ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಅಜೆಕಾರು ಎಣ್ಣೆಹೊಳೆ ನಿವಾಸಿ ಸಂತೋಷ್ ಶೆಟ್ಟಿ(55) ಕೊಲೆಯಾದವರು. ಹೊಟೇಲಿನಲ್ಲಿ ಕಾರ್ಮಿಕನಾಗಿದ್ದ ಉತ್ತರ ಪ್ರದೇಶ ಮೂಲದ ದಿಲೀಪ್ ಗಿರಿ ಎಂಬಾತ ಮದ್ಯಪಾನ ಮಾಡಿ ಕೆಲಸಕ್ಕೆ ಬಂದಿದ್ದು ಹಣಕ್ಕಾಗಿ ಪೀಡಿಸಿದ್ದ. ಸಂತೋಷ್ ಶೆಟ್ಟಿ ಪ್ರತಿಯಾಗಿ ದಿಲೀಪ್ ಗೆ ಕೆಲಸ ಸರಿಯಾಗಿ ಮಾಡು, ಆಮೇಲೆ ಹಣ ಕೇಳು ಎಂದು ಗದರಿಸಿದ್ದರು. ಸಂತೋಷ್ ಶೆಟ್ಟಿ ಅವರಿಂದ ಮುಂಗಡವಾಗಿ 2,500 ರೂ. ಪಡೆದಿದ್ದ ದಿಲೀಪ್ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.
ಮಂಗಳವಾರ ರಾತ್ರಿ ಇಬ್ಬರ ನಡುವೆ ಸಣ್ಣ ಮಟ್ಟದ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಹೋಟೆಲ್ ಅಡುಗೆ ಮನೆಯಿಂದ ಚಾಕು ತಂದು, ಸಂತೋಷ್ ಶೆಟ್ಟಿಯವರ ಕುತ್ತಿಗೆಗೆ ಎರಡು ಬಾರಿ ಇರಿದಿದ್ದಾನೆ. ಇದರಿಂದ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತೋಷ್ ಶೆಟ್ಟಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.