
ಪುಂಜಾಲಕಟ್ಟೆ :ಗಣೇಶೋತ್ಸವದಲ್ಲಿ ಧ್ವನಿವರ್ಧಕ ಬಳಕೆ ; ನಿಲ್ಲಿಸಲು ಬಂದ ಪೊಲೀಸರಿಗೆ ಘೆರಾವ್ ಹಾಕಿ ವಾಗ್ವಾದ, ಪದಾಧಿಕಾರಿಗಳ ವಿರುದ್ಧ ಎಫ್ಐಆರ್, ಪರಂಗಿಪೇಟೆಯಲ್ಲಿ ಬ್ಯಾನರ್ ಹರಿದು ಕಿಡಿಗೇಡಿ ಕೃತ್ಯ..!!

ಬಂಟ್ವಾಳ, ಆ.28 : ಬಂಟ್ವಾಳ ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ಇದರ ವತಿಯಿಂದ ಕಾನೂನು ಉಲ್ಲಂಘಿಸಿ ಧ್ವನಿವರ್ಧಕ ಅಳವಡಿಸಿದ ಬಗ್ಗೆ ಪುಂಜಾಲಕಟ್ಟೆ ಠಾಣೆ ಪೊಲೀಸರು ಗಣೇಶೋತ್ಸವ ಸಮಿತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ.27ರಂದು ರಾತ್ರಿ ಸುಮಾರು 10.45 ಗಂಟೆಯ ವೇಳೆಗೆ ಧ್ವನಿವರ್ಧಕವನ್ನು ಅಳವಡಿಸಿ ಕಾರ್ಯಕ್ರಮವನ್ನು ನಡೆಯುತ್ತಿರುವುದು ಕಂಡುಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಕಾರ್ಯಕ್ರಮದ ಆಯೋಜಕರಲ್ಲಿ ಧ್ವನಿವರ್ಧಕ ಬಳಕೆಯ ಕಾನೂನಿನ ಬಗ್ಗೆ ಹಾಗೂ ಸದ್ರಿ ಕಾನೂನುಗಳನ್ನು ಪಾಲಿಸುವಂತೆ ಹಾಗೂ ಈಗಾಗಲೇ ಠಾಣೆಯಿಂದ ನೀಡಿರುವ ನೋಟೀಸ್ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಧ್ವನಿವರ್ಧಕ ಸ್ಥಗಿತಗೊಳಿಸುವಂತೆ ವಿನಂತಿಸಿದ ಮೇರೆಗೆ, ಸಂಯೋಜಕರು ಧ್ವನಿವರ್ಧಕ ನಿಲ್ಲಿಸಿರುತ್ತಾರೆ.
ಆದರೆ ರಾತ್ರಿ ಸುಮಾರು 11.50 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಪುನಃ ಬಂದಾಗ ಪೊಲೀಸರ ಸೂಚನೆ ಉಲ್ಲಂಘಿಸಿ ಧ್ವನಿವರ್ಧಕವನ್ನು ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳೊಂದಿಗೆ ಕಾನೂನು ಉಲ್ಲಂಘಿನೆಯ ಬಗ್ಗೆ ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ಇದರ ಅಧ್ಯಕ್ಷ ಕೌಶಿಕ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಪುನೀತ್ ಮಡಂತ್ಯಾರು, ತಾರನಾಥ ಕಜೆಕ್ಕಾರು, ಗುರು ಮಡಂತ್ಯಾರು, ನಾಟಕ ಅಯೋಜಕರು ಮತ್ತು ಸುಮಾರು 10-15 ಇತರ ಜನರ ಗುಂಪು ಸೇರಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಪೊಲೀಸರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.
ಸದ್ರಿ ಆರೋಪಿಗಳು ಕಾರ್ಯಕ್ರಮದ ಅಯೋಜಕರಿಗೆ ನೀಡಲಾಗಿದ್ದ ತಿಳುವಳಿಕೆ ಪತ್ರದ ಷರತ್ತನ್ನು ಉಲ್ಲಂಘಿಸಿ ಧ್ವನಿವರ್ಧಕ ಬಳಸಿ, ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 52/2025, ಕಲಂ: 189(2), 191(2),191(3), 132, 190 BNS-2023, ಮತ್ತು ಕಲಂ: 31,37,92(i) KP Act, ಮತ್ತು ಕಲಂ: 5, 6 ಧ್ವನಿ ಮಾಲಿನ್ಯ ನಿಯಂತ್ರಣ ನಿಯಮಗಳು-2000 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಬ್ಯಾನರ್ ಹರಿದು ಕಿಡಿಗೇಡಿ ಕೃತ್ಯ ; ಯುವಕ ವಶಕ್ಕೆ
ಬಂಟ್ವಾಳ ಫರಂಗಿಪೇಟೆ ಸೇವಾಂಜಲಿ ಭವನದಲ್ಲಿ ಆ.24ರಿಂದ 29ರ ವರೆಗೆ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರನ್ನು ಪರಿಸರದ ನಿವಾಸಿ ಚಂದ್ರಶೇಖರ್ ಆಳ್ವ (55) ಎಂಬವರು ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು ಹಾಕಿದ್ದರು. ರೂ. 3,500/- ವೆಚ್ಚದಲ್ಲಿ ಪರಂಗಿಪೇಟೆಯ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿದ್ದು ಸದ್ರಿ ಬ್ಯಾನರನ್ನು ಬುಧವಾರ ರಾತ್ರಿ ಫರಂಗಿಪೇಟೆ ನಿವಾಸಿ ಹೈದರ್ ಎಂಬಾತ ಹರಿದು ಹಾಕಿ ಸುಮಾರು 3,500/- ರೂ. ನಷ್ಟವನ್ನುಂಟು ಮಾಡಿರುವುದಲ್ಲದೇ, ಧಾರ್ಮಿಕ ಭಾವನೆಗೆ ಧಕ್ಕೆ ಪಡಿಸಿ, ಸದ್ರಿ ಕೃತ್ಯದಿಂದಾಗಿ ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ, ಸಾರ್ವಜನಿಕ ವಲಯದಲ್ಲಿ ಭೀತಿಯನ್ನುಂಟು ಮಾಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:129/2025, ಕಲಂ: 299, 192, 353 (1), (b), 57, 324(4) BNS 2023 ರಂತೆ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.