
ಬೀದರ್ :ಬಸ್ ಡಿಪೋ ನಲ್ಲಿ ರಾಕ್ಷಸ ಮ್ಯಾನೇಜರ್ ; ಕಿರುಕುಳಕ್ಕೆ ಬೇಸತ್ತು ಚಾಲಕ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ, ನೋಡಲಾಗದ ಕುಟುಂಬಸ್ಥರ ವೇದನೆ..!!

ಬೀದರ್, ಆ 28 : ಜಿಲ್ಲೆಯ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾರಿಗೆ ಬಸ್ ಡ್ರೈವರ್ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ದುಃಖಕರ ಸಂಗತಿಯಾಗಿಯೇ, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ಬಸ್‌ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜಪ್ಪ ಆರು ಹೆಣ್ಣುಮಕ್ಕಳ ತಂದೆಯಾಗಿದ್ದು, ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಕುಟುಂಬಕ್ಕೆ ಸಂಪೂರ್ಣ ಆಧಾರವಾಗಿದ್ದ ರಾಜಪ್ಪ ಅಕಾಲಿಕವಾಗಿ ಮೃತಪಟ್ಟ ಪರಿಣಾಮ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಶೀಘ್ರದಲ್ಲೇ ನಿವೃತ್ತಿ ಪಡೆಯಬೇಕಾಗಿದ್ದ ಅವರ ಜೀವನ ಅಂತ್ಯ ಕಂಡಿರುವುದು ಹೃದಯ ಕಲುಕುವ ಸಂಗತಿ.
ಬೀದರ್ ಡಿಪೋ ಮ್ಯಾನೇಜರ್ ವಿಠ್ಠಲ್ ಬೋವಿ ನಿರಂತರ ಕಿರುಕುಳ ನೀಡಿದ್ದೇ ಈ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಮೃತರ ಕುಟುಂಬಸ್ಥರ ಗಂಭೀರ ಆರೋಪ ಮಾಡಿದ್ದಾರೆ. ರಾಜಪ್ಪ ಅವರು ಆರೋಗ್ಯ ಸಮಸ್ಯೆ, ವಯಸ್ಸಿನ ಅಡಚಣೆಗಳನ್ನು ಹೇಳಿಕೊಂಡರೂ ಅಧಿಕಾರಿಗಳು ಯಾವುದೇ ರೀತಿಯ ಸಹಾನುಭೂತಿ ತೋರಲಿಲ್ಲವಂತೆ, “ನಮ್ಮ ತಂದೆ ನಿರಂತರ ಒತ್ತಡ ಮತ್ತು ಕಿರುಕುಳಕ್ಕೆ ತುತ್ತಾಗಿದ್ದರು. ಅವರಿಗೆ ನ್ಯಾಯ ಸಿಗಬೇಕು. ಮ್ಯಾನೇಜರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಕುಟುಂಬದವರು ಆಗ್ರಹಿಸಿದ್ದಾರೆ.
ರಜೆ ನಿರಾಕರಣೆ, ನಿರಂತರ ಒತ್ತಡ ;
ಮೃತರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳ ಪ್ರಕಾರ, ರಾಜಪ್ಪ ಅವರಿಗೆ ಬೇಕಾದಾಗ ರಜೆ ನೀಡಲಾಗುತ್ತಿರಲಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ವಿಶ್ರಾಂತಿ ಅಗತ್ಯವಿದ್ದರೂ, ಅಧಿಕಾರಿಗಳು ಅವರನ್ನು ಪ್ರತಿದಿನವೂ ಬಸ್ಸು ಓಡಿಸಲು ಒತ್ತಾಯಿಸುತ್ತಿದ್ದರು. ದೂರದ ಮಾರ್ಗದಲ್ಲಿ ಸಾಮಾನ್ಯವಾಗಿ ಇಬ್ಬರು ಚಾಲಕರ ಅವಶ್ಯಕತೆ ಇದ್ದರೂ, ರಾಜಪ್ಪ ಒಬ್ಬರೇ ನಿರಂತರವಾಗಿ ಡ್ರೈವಿಂಗ್ ಮಾಡುತ್ತಿದ್ದರು. ಇದು ಅವರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ಸಹೋದ್ಯೋಗಿಗಳು ತಿಳಿಸಿದರು.