
ತಲಪಾಡಿ: ಕೇರಳ ಗಡಿಭಾಗ ತಲಪಾಡಿಯಲ್ಲಿ ಭೀಕರ ಅಪಘಾತ ; ಕೆಎಸ್ಸಾರ್ಟಿಸಿ ಬಸ್ ಆಟೋಗೆ ಡಿಕ್ಕಿಯಾಗಿ ಆರು ಮಂದಿ ಸಾವು, ಕುಟುಂಬ ಸಮೇತ ತೆರಳುತ್ತಿದ್ದ ಅಜ್ಜಿನಡ್ಕದ ಐವರು ಮಹಿಳೆಯರು, ಆಟೋ ಚಾಲಕ ದುರಂತ ಸಾವು.

ಮಂಗಳೂರು, ಆ.28 : ಕರ್ನಾಟಕ - ಕೇರಳ ಗಡಿಭಾಗ ತಲಪಾಡಿಯಲ್ಲಿ ಭೀಕರ ಅಪಘಾತವಾಗಿದ್ದು ಕೆಎಸ್ಸಾರ್ಟಿಸಿ ಬಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಕಾಸರಗೋಡು ಕಡೆಯಿಂದ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಸಿ ರೋಡ್ ಕಡೆಯಿಂದ ತಲಪಾಡಿ ಮೂಲಕ ಕೇರಳದ ಕಡೆಗೆ ತೆರಳುತ್ತಿದ್ದ ಆಟೋಗೆ ಡಿಕ್ಕಿಯಾಗಿದೆ. ಆಟೋದಲ್ಲಿದ್ದ ಚಾಲಕ ಸೇರಿ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ.
ಅಜ್ಜಿನಡ್ಕ ನಿವಾಸಿ ಖತೀಜ(60), ಅವರ ತಂಗಿ ನಫೀಸಾ(52), ಖತೀಜ ಅವರ ಅಣ್ಣನ ಮಗಳು ಹಸೀನ(13), ತಂಗಿಯ ಮಗಳು ಆಯಿಷ ಫಿದಾ(19), ಖತೀಜ ಅವರ ಮನೆಗೆ ಬಂದಿದ್ದ ಸಂಬಂಧಿ ಮಹಿಳೆ ಹವ್ವಮ್ಮ (70) ಮತ್ತು ಅಜ್ಜಿನಡ್ಕದ ರಿಕ್ಷಾ ಚಾಲಕ ಹೈದರ್ ಆಲಿ (47) ಮೃತರು. ಇಬ್ಬರ ಮೃತದೇಹ ಸ್ಥಳದಲ್ಲೇ ಇದ್ದು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿತ್ತು.
ಮಳೆಯಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಖತೀಜ ಅವರು ಇಬ್ಬರು ಮಕ್ಕಳು ಮತ್ತು ಇತರ ಸಂಬಂಧಿಕ ಮಹಿಳೆಯರ ಜೊತೆಗೆ ಆಟೋ ರಿಕ್ಷಾದಲ್ಲಿ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ, ಕಾಸರಗೋಡು ಕಡೆಯಿಂದ ಯಮದೂತನ ರೂಪದಲ್ಲಿ ಬಂದ ಬಸ್ ಆಟೋದಲ್ಲಿದ್ದ ಆರು ಮಂದಿಯನ್ನೂ ಆಹುತಿ ಪಡೆದಿದೆ.
ಸ್ಥಳದಲ್ಲಿ ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರು ಕೂಡ ಗಂಭೀರ ಗಾಯಗೊಂಡಿದ್ದಾಗಿ ತಿಳಿದುಬಂದಿದೆ. ಬಸ್ ಡಿಕ್ಕಿಯಾಗಿ ಬಳಿಕ ಹಿಂದಕ್ಕೆ ಬಂದಿದ್ದು ತಿರುಗಿ ನಿಂತಿದೆ. ಈ ವೇಳೆ, ಅಲ್ಲಿದ್ದ ಒಬ್ಬರು ಮಹಿಳೆ ಮತ್ತು ಇನ್ನೊಂದು ನಿಲ್ಲಿಸಿದ್ದ ಆಟೋ ಕೂಡ ಜಖಂ ಆಗಿದೆ. ಮೃತರನ್ನು ಮತ್ತು ಗಾಯಗಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ಒಯ್ಯಲಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ಘಟನೆ ನಡೆದಿದ್ದು ಫ್ಲೈ ಓವರ್ ಮತ್ತು ಮೇಲಿನ ತಲಪಾಡಿಯ ಜಂಕ್ಷನ್ ಮಧ್ಯೆ ಅಪಘಾತ ಉಂಟಾಗಿದೆ. ಘಟನೆಯಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಬಂದು ಕೇಸು ದಾಖಲಿಸಿದ್ದಾರೆ.