
ದಾವಣಗೆರೆ :ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ; ಅಪರೂಪದ ಮೊಟ್ಟೆ ನೋಡಲು ಮುಗಿಬಿದ್ದ ಮಂದಿ

ದಾವಣಗೆರೆ, ಅ 27 : ಸಾಮಾನ್ಯವಾಗಿ ಕೋಳಿಗಳು ಬಿಳಿ ಇಲ್ಲವೇ ಹಳದಿ ಮೊಟ್ಟೆಯನ್ನು ಇಡುವುದನ್ನು ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇಲ್ಲೊಂದು ಕೋಳಿ ನೀಲಿ ಮೊಟ್ಟೆಯನ್ನು ಇಟ್ಟು ಅಚ್ಚರಿಗಳಿಗೆ ಕಾರಣವಾಗಿದೆ. ಹೌದು ಇಂತಹದ್ದೊಂದು ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯಲ್ಲಿ. ಇದು ಅಚ್ಚರಿ ಆದರೂ ಸತ್ಯ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಸದಾ ಬಿಳಿ ಮೊಟ್ಟೆಗಳನ್ನು ಇಡುತ್ತಿದ್ದ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದು, ಜನರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ನೀಲಿ ಮೊಟ್ಟೆ ಕಂಡು ಅಚ್ಚರಿಗೊಳಗಾದ ಮಾಲೀಕ:
ನೀಲಿ ಮೊಟ್ಟೆ ಕಂಡು ಕೋಳಿ ಮಾಲೀಕ ಸೈಯ್ಯದ್ ನೂರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಿನ ನಿತ್ಯವೂ ನಾಟಿ ಕೋಳಿ ಸಹಜವಾಗಿ ಬಿಳಿ ಬಣ್ಣದ ಮೊಟ್ಟೆಯನ್ನೇ ಇಡುತ್ತಿತ್ತು. ಇದೀಗ ಇದ್ದಕ್ಕಿದ್ದಂತೆ ಸೈಯ್ಯದ್ ನೂರ್ ಅವರ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದು, ಸ್ಥಳೀಯ ಜನರ ಹಾಗೂ ಪಶು ಇಲಾಖೆ ಅಧಿಕಾರಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಪ್ರಸ್ತುತ ಮಾಲೀಕ ಸೈಯ್ಯದ್ ನೂರ್ ತನ್ನ ಕೋಳಿ ಇಟ್ಟಿರುವ ನೀಲಿ ಬಣ್ಣದ ಮೊಟ್ಟೆಯನ್ನು ಹಾಗೇ ಇರಿಸಿಕೊಂಡಿದ್ದಾರೆ. ಈ ಕೋಳಿಯನ್ನು ಅವರು ಎರಡು ವರ್ಷಗಳ ಹಿಂದೆ ವ್ಯಾಪಾರಿಯೊಬ್ಬರಿಂದ ಖರೀದಿ ಮಾಡಿ ತಂದಿದ್ದರಂತೆ. ಅಪರೂಪದ ಮೊಟ್ಟೆ ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಈ ಬಗ್ಗೆ ಕೋಳಿ ಮಾಲೀಕ ಸೈಯ್ಯದ್ ನೂರ್ ಮಾತನಾಡಿದ್ದಾರೆ. ''ಹತ್ತು ಕೋಳಿಗಳನ್ನು ಸಾಕುತ್ತಿದ್ದೇನೆ. ಆ ಕೋಳಿಗಳಿಗೆ ದಿನನಿತ್ಯ ಕೊಡುವ ಆಹಾರ ಕೊಡುತಿದ್ದೇನೆ. ಪ್ರತಿಬಾರಿ ಬಿಳಿ ಇಲ್ಲ ಹಳದಿ ಬಣ್ಣದ ಮೊಟ್ಟೆ ಇಡುವುದನ್ನು ನೋಡಿದ್ದೇನೆ. ಇದೇ ಮೊದಲ ಬಾರಿಗೆ ನೀಲಿ ಬಣ್ಣದ ಮೊಟ್ಟೆ ಇಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ 20 ರೂಪಾಯಿ ನೀಡಿ ಈ ಕೋಳಿಯನ್ನು ಖರೀದಿಸಿರುವೆ. ಪ್ರತಿ ದಿನ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ಕಳೆದ ಎರಡು ದಿನಗಳ ಹಿಂದೆ ನೀಲಿ ಬಣ್ಣದ ಮೊಟ್ಟೆ ಇಟ್ಟಿದೆ. ಮೊಟ್ಟೆ ಸಹಿತ ಒಂದು ಫೋಟೋ ತೆಗೆದುಕೊಂಡಿದ್ದೆ. ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿ ಬಂದಿದೆ. ಏನು ಅಂತ ನನಗೂ ಗೊತ್ತಾಗುತ್ತಿಲ್ಲ'' ಎಂದು ಕೋಳಿ ಮಾಲೀಕ ಸೈಯ್ಯದ್ ನೂರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಹಸಿರು ಹಳದಿ ಬಣ್ಣದ ಮೊಟ್ಟೆ ಕೊಡುವುದನ್ನು ನೋಡಿದ್ದೇನೆ, ನೀಲಿ ಬಣ್ಣದ ಮೊಟ್ಟೆ ಕೊಟ್ಟಿರುವುದು ಅಚ್ಚರಿಯೇ ಸರಿ, ಈ ರೀತಿ ಕೋಳಿಗಳು ಅಪರೂಪವಾಗಿ ಮೊಟ್ಟೆ ಇಡುತ್ತವೆ. ನೀಲಿ ಬಣ್ಣದ ಮೊಟ್ಟೆ ಇಟ್ಟಿರುವುದು ಇದೆ ಮೊದಲ ಬಾರಿ ಆಗಿದೆ. ಅಲ್ಲದೇ ಕೋಳಿಯ ಮೆದೋಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣದ ದ್ರವ್ಯದ ಕಾರಣಕ್ಕೆ ಮೊಟ್ಟೆಗೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.