
ಮಂಗಳೂರು: ತಲಪಾಡಿ ಅಪಘಾತ ; ಬಸ್ ಬ್ರೇಕ್ ಫೇಲ್ ಸಂಭವಿಸಿಲ್ಲ, ತಾಂತ್ರಿಕ ದೋಷವೂ ಆಗಿಲ್ಲ, ಚಾಲಕನ ಅಜಾಗರೂಕತೆಯೇ ಕಾರಣ ; ಮಂಗಳೂರು ಕೆಎಸ್ಸಾರ್ಟಿಸಿ ಡೀಸಿ ಸ್ಪಷ್ಟನೆ.!!

ಮಂಗಳೂರು, ಆ.29 : ತಲಪಾಡಿಯಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಆಟೋ ರಿಕ್ಷಾ ಅಪಘಾತಕ್ಕೆ ಬಸ್ ಬ್ರೇಕ್ ಫೇಲ್ ಅಥವಾ ತಾಂತ್ರಿಕ ದೋಷ ಆಗಿರುವುದು ಕಾರಣವಲ್ಲ. ಚಾಲಕನ ಅತಿ ವೇಗದ ಚಾಲನೆಯೇ ಕಾರಣ ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 28 ರಂದು ಮಂಗಳೂರು-1ನೇ ಘಟಕದ ಕೆಎ 19 ಎಫ್ 3407 ಸಂಖ್ಯೆಯ ಬಸ್‍ನಲ್ಲಿ ಚಾಲಕರಾಗಿ ನಿಜಲಿಂಗಪ್ಪ ಛಲವಾದಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾಸರಗೋಡಿನಿಂದ ಮಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಮಧ್ಯಾಹ್ನ 1:45 ರ ಸಮಯದಲ್ಲಿ ತಲಪಾಡಿ ಟೋಲ್ ಸಮೀಪ ಇಳಿಜಾರು ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಬಸ್ ಚಾಲಕ ವಾಹನವನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿರುತ್ತಾರೆ. ಅಷ್ಟರಲ್ಲಿ ಬಸ್ ಆಟೋಗೆ ಅತಿ ವೇಗದಲ್ಲಿ ಡಿಕ್ಕಿಯಾಗಿದ್ದು, ಹಠಾತ್ತನೆ ಸ್ಕಿಡ್ ಆಗಿ ತಿರುಗಿ ನಿಂತಿದೆ. ಅಪಘಾತಕ್ಕೀಡಾದ ಆಟೋದಲ್ಲಿ ಎರಡು ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಸೇರಿ 4 ಜನ ತೀವ್ರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಅಪಘಾತ ಪಡಿಸಿದ ನಿಗಮದ ಚಾಲಕ ಭಯಗೊಂಡು ಬಸ್ಸಿನಿಂದ ಕೆಳಗಿಳಿದ ಓಡಿ ಹೋಗಿದ್ದರಿಂದ ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ 2 ಪಾದಚಾರಿ / ಪ್ರಯಾಣಿಕರಿಗೆ ಹಿಮ್ಮುಖವಾಗಿ ಡಿಕ್ಕಿಯಾಗಿ ನಿಂತಿರುತ್ತದೆ. ಅಪಘಾತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಮಾಧ್ಯಮಗಳಲ್ಲಿ ನಿಗಮದ ವಾಹನದ ನಿರ್ವಹಣೆ ಕುರಿತಂತೆ ತಪ್ಪುಮಾಹಿತಿ ಬಿತ್ತರವಾಗುತ್ತಿದ್ದು, ವಿಷಯಕ್ಕೆ ಸಂಬಂಧಿಸಿದಂತೆ ನಿಗಮದ ವತಿಯಿಂದ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಲಾಗಿದೆ.
ನಿಗಮದ ವಾಹನಗಳಿಗೆ ವಿಮಾ ಪಾಲಿಸಿ ಕರ್ನಾಟಕ ಸರಕಾರದ ಆದೇಶದಂತೆ ಆಂತರಿಕ ನಿಧಿ ಇಡುವ ಮೂಲಕ ಸಂಸ್ಥೆಯ ಎಲ್ಲಾ ವಾಹನಗಳಿಗೆ ಆಂತರಿಕ ವಿಮೆ ಜಾರಿಯಲ್ಲಿರುತ್ತದೆ. ಅಪಘಾತ ಪರಿಹಾರ ನಿಧಿಯಿಂದ ಸದರಿ ಅಪಘಾತದಲ್ಲಿ ಮೃತರಾದ ಆಟೋ ಪ್ರಯಾಣಿಕರ ವಾರಸುದಾರರಿಗೆ ತಲಾ ರೂ.1 ಲಕ್ಷಗಳಂತೆ ತುರ್ತು / ಮಧ್ಯಂತರ ಪರಿಹಾರವನ್ನು ನೀಡಲಾಗಿದೆ.
ಗಾಯಗೊಂಡ ಇಬ್ಬರು ಪಾದಚಾರಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರ ಸಂಪೂರ್ಣ ವೈದ್ಯಕೀಯ ವೆಚ್ಚದ ಮೊತ್ತವನ್ನು ನಿಗಮದ ವತಿಯಿಂದ ಭರಿಸಲಾಗುವುದು. ಅಪಘಾತಕ್ಕೀಡಾದ ವಾಹನದ ಎಫ್.ಸಿ ಆಗಸ್ಟ್ 26 ರಂದು ನವೀಕರಣಗೊಂಡು ಆರ್.ಟಿ.ಓ ಫಿಟ್‍ನೆಸ್ ದೃಢೀಕರಣ ಪ್ರಮಾಣಪತ್ರ ಪಡೆಯಲಾಗಿರುತ್ತದೆ. ವಾಹನವನ್ನು ಮರುದಿನ ಆಗಸ್ಟ್ 27 ರಂದು ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ನಿಯೋಜಿಸಲಾಗಿದ್ದು, ಘಟಕದಿಂದ ಮಾರ್ಗ ಪ್ರಾರಂಭವಾದ ಸಮಯದಿಂದ 9 ಸುತ್ತುವಳಿಗಳನ್ನು ಪೂರ್ಣಗೊಳಿಸಿ ಅಪಘಾತವಾಗುವವರೆಗೆ ಸುಮಾರು 540 ಕಿ.ಮೀ ಕ್ರಮಿಸಿದ್ದು 10ನೇ ಸುತ್ತುವಳಿ (ಕಾಸರಗೋಡು-ಮಂಗಳೂರು)ಯಲ್ಲಿ ಅಪಘಾತ ಸಂಭವಿಸಿರುತ್ತದೆ.
ಅಪಘಾತ ಸ್ಥಳದಲ್ಲಿಯೇ ವಾಹನವನ್ನು ತಾಂತ್ರಿಕ ತಂಡವು ಪರಿಶೀಲಿಸಿ ಯಾವುದೇ ದೋಷವಿಲ್ಲದೇ ಸದರಿ ವಾಹನವು ಸುಸ್ಥಿತಿಯಲ್ಲಿ ಇರುವುದನ್ನು ದೃಢೀಕರಿಸಿರುತ್ತಾರೆ. ಅಲ್ಲದೇ ವಾಹನವನ್ನು ಅಪಘಾತ ಸ್ಥಳದಿಂದ ಬೇರೆ ಚಾಲಕರು ವಾಹನವನ್ನು ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿರುತ್ತಾರೆ. ಒಟ್ಟಾರೆಯಾಗಿ ಈ ಅಪಘಾತವು ನಿಗಮದ ಚಾಲಕರ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ್ದು, ಯಾವುದೇ ರೀತಿಯ ಬ್ರೇಕ್ ಫೇಲ್ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿರುವುದಿಲ್ಲ ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ