
ಮಂಗಳೂರು :ಬಹುಮುಖ ಪ್ರತಿಭೆಯ ಮಂಗಳೂರಿನ ಯುವ ವಕೀಲೆ ಬೆನ್ನುಹುರಿ ಸಮಸ್ಯೆಗೀಡಾಗಿ ಸಾವುtalented young lawyer death

ಮಂಗಳೂರು: ಲೇಖಕಿ ಮತ್ತು ಮಂಗಳೂರಿನಲ್ಲಿ ವೃತ್ತಿಯಲ್ಲಿ ವಕೀಲೆಯಾಗಿದ್ದ ಬಂಟ್ವಾಳ ಮೂಲದ ರಾಜಶ್ರೀ ಜೆ. ಪೂಜಾರಿ (25) ಅಪರೂಪದ ಬೆನ್ನು ಹುರಿ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಂಟ್ವಾಳದಲ್ಲಿ ಬಡ ಕುಟುಂಬದ ಹಿನ್ನೆಲೆಯ ರಾಜಶ್ರೀ ಪೂಜಾರಿ ಸಣ್ಣ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿದ್ದರು. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ, ಪೆರ್ಮುದೆ ಎಕ್ಕಾರಿನಲ್ಲಿ ಪ್ರೌಢಶಾಲೆ, ಕಟೀಲು ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಬಳಿಕ ಕಾನೂನು ಶಿಕ್ಷಣವನ್ನು ಮಂಗಳೂರಿನ ಎಸ್ಡಿಎಂ ಕಾಲೇಜಿನಲ್ಲಿ ಪಡೆದಿದ್ದರು. ಎರಡು ವರ್ಷದಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿಯಲ್ಲಿದ್ದರು. ಶಾಲಾ ಹಂತದಲ್ಲಿಯೇ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿ ಹಲವು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.
ನಿರೂಪಣೆ, ಕ್ವಿಜ್ ಸ್ಪರ್ಧೆಗಳನ್ನು ಏರ್ಪಡಿಸುವುದು, ತುಳು ಪರಿಷತ್ ನಲ್ಲಿ ತೊಡಗಿಸಿ ಸಾಹಿತ್ಯ, ಸಂಘಟನೆ, ಆಕಾಶವಾಣಿ ಇನ್ನಿತರ ಮಾಧ್ಯಮಗಳಲ್ಲಿ ಕವನವಾಚನ ಚರ್ಚಾ ಕೂಟಗಳಲ್ಲಿ ಭಾಗವಹಿಸಿದ್ದರು. ಫೇಸ್ಬುಕ್ ಜಾಲತಾಣದಲ್ಲಿ ಪ್ರತಿ ಶನಿವಾರ ಸಂಜೆ 5 ಗಂಟೆಗೆ ಕತೆತ ಕದಿಕೆ ಎಂಬ ಹೆಸರಿನಲ್ಲಿ ತುಳು ಕತೆ ವಾಚನ ಮಾಡುತ್ತಿದ್ದರು. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸುಮ್ಮನೆ ಕೂರಬಾರದು ಅಂತ ಯೋಚಿಸಿ ಜಾಲತಾಣದಲ್ಲಿಯೇ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ನೂರು ಸರಣಿಗಳನ್ನು ಪೂರೈಸಿದ್ದರು.
ಇಂಥ ಬಹುಮುಖ ಪ್ರತಿಭೆಯ ಯುವ ವಕೀಲೆಯಾಗಿದ್ದ ರಾಜಶ್ರೀಗೆ ಇತ್ತೀಚಿಗೆ ಬೆನ್ನುಹುರಿಯಲ್ಲಿ ಸಮಸ್ಯೆ ಎದುರಾಗಿತ್ತು. ಮಂಗಳೂರಿನ ವಕೀಲ ಜಗದೀಶ್ ಕೆ.ಆರ್ ಅವರ ಜೊತೆಗೆ ಜೂನಿಯರ್ ಆಗಿದ್ದ ಈಕೆಯನ್ನು 15 ದಿನಗಳ ಹಿಂದೆ ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ನಾಲ್ಕು ಲಕ್ಷ ಆಗುತ್ತೆ, ಸಹಾಯ ಮಾಡುವಂತೆಯೂ ಜೊತೆಗಿದ್ದವರು ಕೇಳಿಕೊಂಡಿದ್ದರು. ಆದರೆ ಆಪರೇಶನ್ ಆಗಿ ಮನೆಗೆ ತೆರಳಿದ್ದ ಅವರಿಗೆ ಮತ್ತೆ ಅನಾರೋಗ್ಯ ಉಂಟಾಗಿ ಇಹಲೋಕ ತ್ಯಜಿಸಿದ್ದಾರೆ. ಎಕ್ಕಾರು ನಿವಾಸಿಯಾಗಿದ್ದ ಅವರಿಗೆ ತಂದೆ, ತಾಯಿ, ಸೋದರ ಇದ್ದಾರೆ. ಕಲೆ, ಸಾಹಿತ್ಯ ಚಟುವಟಿಕೆಗಾಗಿ ರಾಜಶ್ರೀಗೆ ಕನ್ನಡ ಕುವರಿ, ಕನ್ನಡ ಧ್ವನಿ, ಬುಕ್ ಬ್ರಹ್ಮ ಪ್ರಶಸ್ತಿಗಳು ಸಿಕ್ಕಿದ್ದವು.