
ಬೆಂಗಳೂರು :ವೈಯಕ್ತಿಕ ಕಾರಣದ ನೆಪ ; ಎಸ್ಐಟಿ ತಂಡದಿಂದ ಹೊರಗುಳಿದ ಐಪಿಎಸ್ ಅಧಿಕಾರಿ ಸೌಮ್ಯಲತಾ, ಧರ್ಮಸ್ಥಳ ಸಂಸ್ಥೆಯಲ್ಲಿ ಕಲಿತಿದ್ದೇನೆಂದು ಮತ್ತೊಬ್ಬರು ಹೊರಕ್ಕೆ..!!

ಬೆಂಗಳೂರು, ಜುಲೈ 25 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದ ತನಿಖೆಗೆ ರಚಿಸಿರುವ ಎಸ್ಐಟಿ ತಂಡದಿಂದ ಐಪಿಎಸ್ ಅಧಿಕಾರಿ, ಬೆಂಗಳೂರು ಸಿಎಆರ್ ಡಿಸಿಪಿ ಡಾ.ಎಸ್.ಕೆ.ಸೌಮ್ಯಲತಾ ಅವರು ಹಿಂದೆ ಸರಿಯಲು ನಿರ್ಧರಿಸಿದ್ದು ಈ ಬಗ್ಗೆ ತಂಡದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ಪತ್ರ ಬರೆದಿದ್ದು, ''ವೈಯಕ್ತಿಕ ಕಾರಣಕ್ಕೆ ವಿಶೇಷ ತನಿಖಾ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಆದ್ದರಿಂದ ನನ್ನನ್ನು ತಂಡದಿಂದ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ತನಿಖೆಯ ರೂಪುರೇಷೆಗಳ ಕುರಿತು ಸಿಐಡಿ ಕಚೇರಿಯಲ್ಲಿ ನಡೆದ ಎಸ್ಐಟಿ ಸಭೆಗೂ ಸೌಮ್ಯಲತಾ ಗೈರಾಗಿದ್ದರು. ಮನವಿಯನ್ನು ಪುರಸ್ಕರಿಸಿರುವ ಪ್ರಣವ್ ಮೊಹಾಂತಿ, ಎಸ್‌ಐಟಿ ತಂಡದಿಂದ ಸೌಮ್ಯಲತಾ ಅವರ ಹೆಸರನ್ನು ಕೈಬಿಡುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಗೊತ್ತಾಗಿದೆ.
ಎಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ರಚಿಸಲಾಗಿರುವ ನಾಲ್ವರು ಸದಸ್ಯರ ಎಸ್‌ಐಟಿಗೆ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಡಿಸಿಪಿ ಸೌಮ್ಯಲತಾ, ಎಎನ್ಎಫ್ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನಿಯೋಜಿಸಲಾಗಿತ್ತು. ಈ ತಂಡದಿಂದ ಸೌಮ್ಯಲತಾ ಹಿಂದೆ ಸರಿದಿರುವುದರಿಂದ ಬೇರೊಬ್ಬ ಮಹಿಳಾ ಐಪಿಎಸ್ ಅಧಿಕಾರಿ ನಿಯೋಜನೆಗೆ ಸರಕಾರ ಚಿಂತನೆ ನಡೆಸಿದೆ.
ಅಧಿಕೃತವಾಗಿ ಮಾಹಿತಿ ತಿಳಿಸಿಲ್ಲ
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, 'ಎಸ್ ಐಟಿ ಮುಖ್ಯಸ್ಥರಾಗಲಿ ಅಥವಾ ಅಧಿಕಾರಿ ಸೌಮ್ಯಲತಾ ಅವರಾಗಲೀ ಅಧಿಕೃತವಾಗಿ ನನಗೆ ಮಾಹಿತಿ ತಿಳಿಸಿಲ್ಲ. ಆದರೆ ಅನಧಿಕೃತವಾಗಿ ಸೌಮ್ಯಲತಾ ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣಕ್ಕೆ ಎಸ್ ಐಟಿಯಿಂದ ಹೊರಗುಳಿಯುವ ಬಗ್ಗೆ ಅವರು ಮಾಹಿತಿ ಕೊಟ್ಟಿದ್ದಾರೆ. ಅವರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮತ್ತೊಬ್ಬ ಪೊಲೀಸ್ ಅಧಿಕಾರಿಯೂ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ನಾಲ್ಕು ಐಪಿಎಸ್ ಅಧಿಕಾರಿಗಳು ಹಾಗೂ 20 ಜನ ಪೊಲೀಸ್ ಸಿಬ್ಬಂದಿಯನ್ನು ಎಸ್‌ಐಟಿಗೆ ನಿಯೋಜಿಸಿ ಡಿಜಿಪಿ ಡಾ.ಎಂ.ಎ ಸಲೀಂ ಆದೇಶ ಹೊರಡಿಸಿದ್ದರು. 20 ಸಿಬ್ಬಂದಿಯ ಪೈಕಿ ಒಬ್ಬ ಪೊಲೀಸ್ ಅಧಿಕಾರಿ ಧರ್ಮಸ್ಥಳ ಕ್ಷೇತ್ರದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೆ ಎಂಬ ಕಾರಣ ನೀಡಿ ತನಿಖಾ ತಂಡದಿಂದ ಕೈಬಿಡುವಂತೆ ಕೋರಿದ್ದಾರೆ. ಈ ಅಧಿಕಾರಿ ಸಹ ಎಸ್‌ಐಟಿ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಗೊತ್ತಾಗಿದೆ. ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ತನಿಖೆಯಿಂದ ದೂರ ಸರಿದ ಅಧಿಕಾರಿಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿ ಹೊಸಬರ ನೇಮಕಕ್ಕೆ ಮನವಿ ಮಾಡುವ ಸಾಧ್ಯತೆಯಿದೆ