
ದಾವಣಗೆರೆ:ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು ಮಾಡಿದ ನರಸತ್ತ ಅಧಿಕಾರಿಗಳು ; ಹೊಲದಲ್ಲೇ ಉರುಳಾಡಿ ಆಕ್ರೋಶ, ದುಃಖ ವ್ಯಕ್ತಪಡಿಸಿದ ರೈತರು..!!

ದಾವಣಗೆರೆ: ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಮಕ್ಕೆಜೋಳ, ಟೊಮೆಟೋ ಗಿಡಗಳನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ತೆರವು ಕ್ರಮ ವಿರೋಧಿಸಿ ರೈತರು, ಮಹಿಳೆಯರು ಹೊಲದಲ್ಲೇ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ನರಸೀಪುರ ಗ್ರಾಮದ ಕೂಗಳತೆ ದೂರದಲ್ಲಿರುವ ಹೊನ್ನೂರಿನ ಕೆರೆ ನೀರಿಲ್ಲದೆ ಒಣಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಪಕ್ಕದ ಭಾಗದ ರೈತರು ಅರ್ಧ ಎಕರೆ, ಒಂದು ಎಕರೆ ಭಾಗದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಆದರೆ, ಅದು ಸರ್ಕಾರಿ ಜಾಗವಾದ್ದರಿಂದ ನೀರಾವರಿ ಇಲಾಖೆ ಒತ್ತುವರಿ ತೆರವು ಮಾಡಿದೆ. ಉತ್ತಮವಾಗಿ ಬೆಳೆದಿದ್ದ ಬೆಳೆ ನಾಶಗೊಂಡ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರು 'ನಮಗೆ ಒಂದು ಮಾತು ಹೇಳದೆ, ಟ್ರಾಕ್ಟರ್ ಮೂಲಕ ಬೆಳೆಯನ್ನುನಾಶಪಡಿಸಿದ್ದಾರೆ' ಎಂದು ಆರೋಪ ಮಾಡಿದ್ದಾರೆ.
ನಿರಾವರಿ ಇಲಾಖೆಯಿಂದ ಈ ಮೊದಲೇ ರೈತರಿಗೆ ಇಲ್ಲಿ ಬೆಳೆ ಬೆಳೆಯಬೇಡಿ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸಲಾಗಿತ್ತು. ಆದರೂ ಸಹ ಒತ್ತುವರಿ ಜಾಗದಲ್ಲಿ ಕೃಷಿ ಮಾಡಿದ್ದಾರೆ. ನಮಗೆ ಸರ್ಕಾರದ ಆದೇಶ ಇರುವುದರಿಂದ ಒತ್ತುವರಿ ತೆರವು ಮಾಡಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರವೀಣ್ ಮಾಧ್ಯಮದವರೊಂದಿಗೆ ಮಾತನಾಡಿ, "ನಾವು ಈ ಮುಂಚೆಯೇ ಇಲ್ಲಿನ ರೈತರಿಗೆ ನೋಟಿಸ್ ನೀಡಿದ್ದೆವು. ಜಾಗೃತಿ ಕೂಡ ಮೂಡಿಸಿದ್ದೆವು. ಕೆರೆ ಜಾಗದಲ್ಲಿ ಒತ್ತುವರಿ ಮಾಡಿ ಬೆಳೆ ಬೆಳೆಯಬೇಡಿ ಎಂದು ಹೇಳಿದ್ದೆವು. ಸರ್ಕಾರಿ ಕೆರೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ನೋಟಿಸ್ ಕೊಟ್ಟು, ಯಾರೂ ಬೆಳೆ ಬೆಳೆಯದಂತೆ ಗ್ರಾಮಗಳಲ್ಲಿ ಡಂಗೂರ ಸಾರಿದ್ದೆವು. ಆದರೆ ನಮ್ಮ ಯಾವುದೇ ನೋಟಿಸ್ಗೆ ಬೆಲೆ ಕೊಡದೆ, ಬೆಳೆ ಬೆಳೆದಿದ್ದಾರೆ. ಹೀಗಾಗಿ, ಸರ್ಕಾರ ಒತ್ತುವರಿ ಜಾಗದಲ್ಲಿನ ಎಲ್ಲಾ ಬೆಳೆಯನ್ನು ತೆರವುಗೊಳಿಸಿ ಎಂದು ಆದೇಶ ಮಾಡಿದ್ದರಿಂದ, ನಾವು ಈ ಕ್ರಮ ಕೈಗೊಂಡಿದ್ದೇವೆ. ಸರ್ಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡರೂ ಅದನ್ನು ತೆರವು ಮಾಡುತ್ತೇವೆ. ಇದು ಸರ್ಕಾರದ ಆದೇಶ" ಎಂದು ತಿಳಿಸಿದರು.
ರೈತನ ಅಳಲು:
ರೈತ ನಾಗರಾಜ್ ಅವರು ಮಾತನಾಡಿ, "ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಏಕಾಏಕಿ ಬಂದು ಬೆಳೆ ನಾಶ ಮಾಡಿದ್ದು, ನಮಗೆ ಹೇಳಿಲ್ಲ. 25 ಎಕರೆ ಪ್ರದೇಶದಲ್ಲಿನ ಬೆಳೆಯನ್ನು ಈ ರೀತಿ ನಾಶ ಮಾಡಿದ್ದಾರೆ. ನಮಗೆ ಒಂದೂವರೆ ತಿಂಗಳು ಕಾಲಾವಕಾಶ ಕೊಟ್ಟಿದ್ದರೆ ಸಾಕಿತ್ತು, ಬೆಳೆ ಕೈಗೆ ಬರುತ್ತಿತ್ತು" ಎಂದು ಆಕ್ರೋಶ ಹೊರಹಾಕಿದರು.
ಮತ್ತೋರ್ವ ರೈತ ಮಹಿಳೆ ಪ್ರತಿಕ್ರಿಯಿಸಿ "ಮೊದಲೇ ಹೇಳಿದ್ದರೆ ಹಣ ಖರ್ಚು ಮಾಡಿ ಬೆಳೆ ಹಾಕುತ್ತಿರಲಿಲ್ಲ. ಇದೀಗ ಬೆಳೆ ಹಾಕಿದ ಮೇಲೆ ಬಂದು ಹೊಲ ನಾಶ ಮಾಡಿರುವುದು ಎಷ್ಟು ಸರಿ. ಆಗ ಕೆರೆ ನೀರು ಬಂದು ಅಡಿಕೆ ತೋಟ ನಾಶವಾಗುತ್ತಿತ್ತು. ಈಗ ಇವರು ಬಂದು ನಾಶ ಮಾಡುತ್ತಿದ್ದಾರೆ. ಬೆಳೆಗೆ 50 ಸಾವಿರಗಟ್ಟಲೇ ಹಣ ಖರ್ಚು ಮಾಡಿದ್ದೇವೆ" ಎಂದು ಅಳಲು ತೋಡಿಕೊಂಡರು.