
MRPL :ಹಸಿರು ವಲಯಕ್ಕೆ ಭೂಸ್ವಾಧೀನ ; ಸಂಸದ ಚೌಟ ನೇತೃತ್ವದಲ್ಲಿ ಪರಿಹಾರಕ್ಕೆ ಒಮ್ಮತದ ನಿರ್ಣಯ, ಎಕರೆಗೆ 80 ಲಕ್ಷ, ಕುಟುಂಬಕ್ಕೆ ಉದ್ಯೋಗ ಬದಲು 20 ಲಕ್ಷ ಹೆಚ್ಚುವರಿ.

ಮಂಗಳೂರು: MRPL ಘಟಕದ ಸುತ್ತ ಹಸಿರು ವಲಯ ನಿರ್ಮಾಣಕ್ಕೆ ಸಂಬಂಧಿಸಿ ಬಾಳ, ಜೋಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 27 ಎಕರೆ ಭೂಸ್ವಾಧೀನಕ್ಕೆ ಉದ್ದೇಶಿಸಲಾಗಿದ್ದು ವಸತಿ ಕಳಕೊಳ್ಳುವವರಿಗೆ ಸೂಕ್ತ ಪರಿಹಾರ ಒದಗಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಎಂಆರ್ ಪಿಎಲ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಯಿತು.
ಪ್ರತಿ ಎಕರೆಗೆ 80 ಲಕ್ಷ ರೂ. ಪರಿಹಾರ, ಉದ್ಯೋಗ ಬದಲು ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ನಗದು ಮತ್ತು ನಿವೇಶನ ಸೇರಿದಂತೆ ಪರಿಹಾರ ನೀಡಲು ಎಂಆರ್ ಪಿಎಲ್ ಕಂಪನಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಲವು ವರ್ಷಗಳಿಂದ ಬಾಕಿ ಇರುವ ಈ ವಿಷಯವನ್ನು ಎಲ್ಲರಿಗೂ ತೃಪ್ತಿಕರವಾಗಿ ಇತ್ಯರ್ಥ ಪಡಿಸಬೇಕು. ನಿರ್ವಸಿತರ ಸಮಸ್ಯೆಯ ತೀವ್ರತೆ ತನಗೆ ಅರಿವಿದ್ದು, ಉತ್ತಮ ಪ್ಯಾಕೇಜ್ ದೊರಕಬೇಕು ಎಂದು ಸಂಸದ ಚೌಟ ಹೇಳಿದರು.
ಹಸಿರು ವಲಯಕ್ಕೆ ಗುರುತಿಸಲಾದ 27 ಎಕರೆಯಲ್ಲಿ 408 ಡೋರ್ ನಂಬರ್ ಗಳಿದ್ದು, 93.96 ಕೋಟಿ ರೂ. ಭೂಸ್ವಾಧೀನಕ್ಕೆ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ನಡೆಸಿದ ಕೆಪಿಟಿ ಸಂಸ್ಥೆ ವರದಿ ನೀಡಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, MRPL ಸಲ್ಲಿಸಿರುವ ಪ್ಯಾಕೇಜ್ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು. ಭೂಸ್ವಾಧೀನಕ್ಕೆ ಗುರುತಿಸಿದ 27 ಎಕರೆ ಜಮೀನು ಜೋಕಟ್ಟೆ ಮತ್ತು ಬಾಳ ಗ್ರಾ.ಪಂ ಹಾಗೂ ಬಜಪೆ ಪ.ಪಂ. ವ್ಯಾಪ್ತಿಯಲ್ಲಿದ್ದು, ಈ ಪ್ರದೇಶಗಳಲ್ಲಿ ಹೊಸದಾಗಿ ಡೋರ್ ನಂಬರ್ ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, MRPL ಎಂ.ಡಿ. ಶ್ಯಾಂಪ್ರಸಾದ್, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ರಾಜು, ನಿರ್ವಸಿತರ ಮುಖಂಡರಾದ ಮುನೀರ್ ಕಾಟಿಪಳ್ಳ ಮತ್ತಿತರರು ಇದ್ದರು.