ಪುತ್ತೂರು :ಯಕ್ಷಗಾನ ಪರಂಪರೆಯ ಹಳೆಯ ಕೊಂಡಿ, ಸ್ತ್ರೀಯರನ್ನೇ ನಾಚಿಸುತ್ತಿದ್ದ ಅಪ್ರತಿಮ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟರಮಣ ಭಟ್ ಇನ್ನಿಲ್ಲ..!!

ಪುತ್ತೂರು, ಜುಲೈ 19 : ಯಕ್ಷಗಾನ ಕಲಾ ಪರಂಪರೆಯ ಹಳೆಯ ಕೊಂಡಿ, ಸ್ತ್ರೀಯರನ್ನೇ ನಾಚಿಸುವ ರೀತಿಯಲ್ಲಿ ಸ್ತ್ರೀ ವೇಷಗಳನ್ನು ಮಾಡಿ ಐವತ್ತು ವರ್ಷಗಳ ಹಿಂದೆಯೇ ಕರಾವಳಿ ಜನರ ಮನಸೂರೆಗೊಳಿಸಿದ್ದ, ತೆಂಕು ಬಡಗು ತಿಟ್ಟಿನಲ್ಲಿ ಬೆರಗು ಮೂಡಿಸಿದ್ದ ಕಲಾವಿದರಾಗಿ ವಯೋ ನಿವೃತ್ತಿಯಲ್ಲಿದ್ದ ಪಾತಾಳ ವೆಂಕಟರಮಣ ಭಟ್ (92) ಇನ್ನಿಲ್ಲ. ಶನಿವಾರ ಅವರು ಹೃದಯಾಘಾತಕ್ಕೀಡಾಗಿ ಸ್ವಗೃಹ ಉಪ್ಪಿನಂಗಡಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ಅನನ್ಯ ರೀತಿಯಲ್ಲಿ ವೇಷಗಳನ್ನು ಮಾಡಿ ಲಕ್ಷಾಂತರ ಯಕ್ಷಾಭಿಮಾನಿಗಳನ್ನು ಪಡೆದಿದ್ದ ಪಾತಾಳ ಎಂಬ ನಾಮಾಂಕಿತದಲ್ಲೇ ಪ್ರಸಿದ್ಧಿ ಪಡೆದಿದ್ದರು. 1933ರ ನವೆಂಬರ್ 16ರಂದು ಪುತ್ತೂರು ಸಮೀಪದ ಬೈಪದವು ಎಂಬಲ್ಲಿ ಜನಿಸಿದ್ದ ಅವರು, ಚಿಕ್ಕಂದಿನಲ್ಲೇ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡು ಕಲೆಯನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದವರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲೇ ಆ ಕಾಲದ ಯಕ್ಷಗಾನ ಗುರು ಪುತ್ತೂರು ಕೃಷ್ಣ ಭಟ್ಟರಿಂದ ತೆಂಕುತಿಟ್ಟು ಯಕ್ಷಗಾನದ ಪಟ್ಟುಗಳನ್ನು ಕಲಿತು, ಪೂರ್ಣಕಾಲಿಕ ಕಲಾವಿದರಾಗಿ ರೂಪುಗೊಂಡಿದ್ದರು. ಆಗಿನ ಕಾಲದಲ್ಲಿ ಕೃಷಿ ಬಿಟ್ಟರೆ, ಮನರಂಜನೆಗೆ ಯಕ್ಷಗಾನ ಮಾತ್ರ ಇದ್ದ ಕಾಲದಲ್ಲಿ ಅದನ್ನು ವೃತ್ತಿಪರ ಕಲಾವಿದರಾಗಿದ್ದರು.
ಮೊದಲಿಗೆ ಸೌಕೂರು ಮೇಳ, ಆನಂತರ 1954ರಲ್ಲಿ ಮೂಲ್ಕಿ ಮೇಳ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದ ನಂತರ ಪಾತಾಳ ಅನ್ನುವ ಹೆಸರಿಗೆ ಯಕ್ಷಗಾನ ಪ್ರಿಯರಲ್ಲಿ ಹೊಸ ವ್ಯಾಖ್ಯಾನ ದೊರಕಿತ್ತು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣ ಯುಗವಾಗಿತ್ತು. ಸ್ತ್ರೀಯರನ್ನೇ ನಾಚಿಸುವ ರೀತಿಯ ಅಭಿನಯ ಜನಮನ ಸೂರೆಗೊಂಡಿದ್ದು ಆ ಕಾಲದಲ್ಲೇ.
ಪೌರಾಣಿಕ ಪ್ರಸಂಗಗಳಲ್ಲಿ ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ದೌಪದಿ, ಮೀನಾಕ್ಷಿ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು ವೆಂಕಟರಮಣ ಭಟ್ಟರು. ಪಾತಾಳ ಭಟ್ಟರು ಇದ್ದಾರೆಂದರೆ ಯಕ್ಷಗಾನ ರೈಸುತ್ತದೆ ಎಂದೇ ಲೆಕ್ಕ ಅನ್ನುವಷ್ಟರ ಮಟ್ಟಿಗೆ ಅವರಿಗೆ ಖ್ಯಾತಿ ಮತ್ತು ಜನಪ್ರಿಯತೆ ಇತ್ತು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ.