
ಧರ್ಮಸ್ಥಳ: ಹೆಣ ಹೂತ ಪ್ರಕರಣ ; ಟೀಕೆ ಬೆನ್ನಲ್ಲೇ ಎಸ್ಐಟಿ ರಚಿಸಿದ ಸಿಎಂ ಸಿದ್ದರಾಮಯ್ಯ, ಡಿಜಿಪಿ ಪ್ರಣವ್ ಮೊಹಂತಿ, ಡಿಐಜಿ ಅನುಚೇತ್ ಒಳಗೊಂಡ ವಿಶೇಷ ತನಿಖಾ ತಂಡ ನೇಮಕ.

ಮಂಗಳೂರು, ಜುಲೈ 20: ರಾಜ್ಯದಲ್ಲಿ ತೀವ್ರ ಸಂಚಲನ ಎಬ್ಬಿಸಿರುವ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ನೂರಾರು ಕೊಲೆ ಮತ್ತು ಅತ್ಯಾಚಾರ ಹಾಗೂ ಹೆಣಗಳನ್ನು ಹೂತು ಹಾಕಿದ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಮಾಡಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು ಮಂಗಳೂರಿನ ದಕ್ಷಿಣ ಕನ್ನಡ ಎಸ್ಪಿ ಕಚೇರಿಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.
ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ ಎಂ.ಎನ್ ಅನುಚೇತ್, ಸಿಎಆರ್ ಕೇಂದ್ರ ವಿಭಾಗದ ಡಿಸಿಪಿ ಸೌಮ್ಯಲತಾ, ಎಎನ್ಎಫ್ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಸೇರಿಸಲಾಗಿದ್ದು ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವಿಭಾಗದ ಸಿಬಂದಿ ಬಳಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಮಹಿಳಾ ಆಯೋಗವು ಧರ್ಮಸ್ಥಳ ಘಟನೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಎಸ್ಐಟಿ ರಚಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಈ ಪತ್ರವನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಎಸ್ಐಟಿ ರಚಿಸಿ ಆದೇಶ ಮಾಡಿದ್ದು ತನಿಖಾ ಪ್ರಕ್ರಿಯೆ ಬಗ್ಗೆ ಆಗಿಂದಾಗ್ಗೆ ಡಿಜಿಪಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ ಮತ್ತು ಇನ್ನಿತರ ಘಟನೆಗಳ ಬಗ್ಗೆ ರಾಜ್ಯದ ವಿವಿಧೆಡೆ ದಾಖಲಾಗಿರುವ ಪ್ರಕರಣಗಳನ್ನು ತನಿಖಾ ತಂಡಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಜುಲೈ 3ರಂದು ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಧರ್ಮಸ್ಥಳ ಠಾಣೆಗೆ ಮತ್ತು ದಕ್ಷಿಣ ಕನ್ನಡ ಎಸ್ಪಿ ಕಚೇರಿಗೆ ಬಂದು ತಾನು ಧರ್ಮಸ್ಥಳ ಆಸುಪಾಸಿನ ಕಾಡಿನಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆಂದು ಹೇಳಿ ದೂರು ನೀಡಿದ್ದರು. ಈ ವಿಚಾರ ತೀವ್ರ ಸಂಚಲನ ಎಬ್ಬಿಸುತ್ತಿದ್ದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ 164 ಸೆಕ್ಷನ್ ಅಡಿ ಹೇಳಿಕೆಯನ್ನೂ ದಾಖಲಿಸಿದ್ದರು. ಅಲ್ಲದೆ, ಈ ಕೃತ್ಯದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದು ತನಗೆ ಸೂಕ್ತ ರಕ್ಷಣೆ ನೀಡಬೇಕೆಂದೂ ಕೇಳಿಕೊಂಡಿದ್ದ. ಬೆಂಗಳೂರಿನ ವಕೀಲರ ನಿಯೋಗದ ಜೊತೆಗೆ ಈ ವ್ಯಕ್ತಿ ಬಂದು ಹೇಳಿಕೆ ನೀಡಿದ್ದರಿಂದ ರಾಜ್ಯ ಮತ್ತು ದೇಶದಲ್ಲಿ ಭಾರೀ ಕುತೂಹಲ, ಹಲವಾರು ಪ್ರಶ್ನೆಗಳು ಏಳುವಂತೆ ಮಾಡಿತ್ತು. ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಪ್ರಗತಿಪರರು ಮತ್ತು ಹಿರಿಯ ವಕೀಲರಿದ್ದ ತಂಡವು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿತ್ತು.
ಇದಲ್ಲದೆ, ಕೇರಳದ ಸಿಪಿಐ ಸಂಸದರೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದು ಘಟನೆಯ ಬಗ್ಗೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ಆಕ್ಷೇಪಿಸಿದ್ದಲ್ಲದೆ, ಎನ್ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಎಸ್ಐಟಿ ರಚಿಸಿ ಆದೇಶ ಮಾಡಿದ್ದು ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ಮಾಡಿ ಶೀಘ್ರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.